ದಕ್ಷಿಣ ಗಾಝಾದಿಂದ ಪಡೆಗಳನ್ನು ಹಿಂಪಡೆದ ಇಸ್ರೇಲ್: ವರದಿ
ಜೆರುಸಲೇಮ್: ಇಸ್ರೇಲ್ ಸೇನೆಯು ಒಂದು ತುಕಡಿ ಹೊರತುಪಡಿಸಿ ಉಳಿದೆಲ್ಲಾ ಪದಾತಿ ಪಡೆಗಳನ್ನು ದಕ್ಷಿಣ ಗಾಝಾ ಪಟ್ಟಿಯಿಂದ ಹಿಂದೆಗೆದುಕೊಂಡಿದೆ ಎಂದು ವರದಿಯಾಗಿದೆ. ತುಕಡಿಯ ವಾಪಸಾತಿಯು ಗಾಝಾದ ರಫಾ ನಗರಕ್ಕೆ ದೀರ್ಘಾವಧಿಯ ಆಕ್ರಮಣದ ಅಪಾಯವನ್ನು ವಿಳಂಬಗೊಳಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಮೀಸಲು ಪಡೆಗೆ ತುಸು ವಿಶ್ರಾಂತಿ ಒದಗಿಸಲು ಮತ್ತು ಗಾಝಾದಲ್ಲಿ ಮಾನವೀಯ ಪರಿಸ್ಥಿತಿಗಳನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಮೆರಿಕದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಿಂದಲೇ ಇಸ್ರೇಲ್ ಗಾಝಾದಲ್ಲಿನ ಪದಾತಿ ದಳದ ಪ್ರಮಾಣವನ್ನು ಕಡಿಮೆಗೊಳಿಸುತ್ತಿದೆ. ಪಡೆಗಳನ್ನು ಹಿಂದಕ್ಕೆ ಪಡೆಯಲು ಕಾರಣವನ್ನು ಇಸ್ರೇಲ್ ಸೇನೆಯ ವಕ್ತಾರರು ಬಹಿರಂಗಪಡಿಸಿಲ್ಲ.
ಈ ಮಧ್ಯೆ, ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿ ಹಾಗೂ ಒತ್ತೆಯಾಳುಗಳ ಬಿಡುಗಡೆಯ ಉದ್ದೇಶ ಹೊಂದಿರುವ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆಯನ್ನು ಈಜಿಪ್ಟ್ ಸಜ್ಜುಗೊಳಿಸುತ್ತಿದ್ದು ಈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಇಸ್ರೇಲ್ ಮತ್ತು ಹಮಾಸ್ ಎರಡೂ ದೃಢಪಡಿಸಿವೆ. ಆದರೆ ಹಮಾಸ್‍ನ ಅತಿಯಾದ ಷರತ್ತುಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ. ಯಾವುದೇ ಕದನವಿರಾಮ ಒಪ್ಪಂದವು ಇನ್ನೂ ಹಮಾಸ್‍ನ ಒತ್ತೆಸೆರೆಯಲ್ಲಿ ಇರುವ 133 ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡಿರಬೇಕು. ಹಮಾಸ್‍ನ ಎಲ್ಲಾ ಷರತ್ತುಗಳನ್ನೂ ಒಪ್ಪಿದರೆ ಅವರು ಅಕ್ಟೋಬರ್ 7ರಂದು ನಡೆಸಿದ ದಾಳಿಯನ್ನು ಪುನರಾವರ್ತಿಸಲು ಉತ್ತೇಜನ ನೀಡಿದಂದಾಗುತ್ತದೆ ಎಂದು ನೆತನ್ಯಾಹು ಸಂಪುಟ ಸಭೆಯ ಬಳಿಕ ಹೇಳಿದ್ದಾರೆ.
ಈ ಮಧ್ಯೆ, ಗಾಝಾ ಪಟ್ಟಿಯ ಖಾನ್‍ಯೂನಿಸ್ ನಗರದ ಮಧ್ಯಭಾಗವನ್ನು ಬಿಟ್ಟು ಪೂರ್ವದ ಜಿಲ್ಲೆಯತ್ತ ತೆರಳುತ್ತಿರುವುದಾಗಿ ಖಾನ್‍ಯೂನಿಸ್‍ನ ಫೆಲೆಸ್ತೀನಿಯನ್ ನಿವಾಸಿಗಳು ದೃಢಪಡಿಸಿದ್ದಾರೆ.