ರಫಾ ಮನೆಯ ಮೇಲೆ ಇಸ್ರೇಲ್ ನಿಂದ ಬಾಂಬ್ | 6 ಮಕ್ಕಳು ಸೇರಿ 10 ಮಂದಿ ಸಾವು
ರಫಾ: ಗಾಝಾದ ದಕ್ಷಿಣದ ತುದಿಯ ನಗರ ರಫಾದಲ್ಲಿರುವ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಫಾದ ಪಶ್ಚಿಮದ ಉಪನಗರ ತಾಲ್ ಅಸ್-ಸುಲ್ತಾನ್ನಲ್ಲಿರುವ ಮನೆಯ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆದಿದೆ. ಮೃತರ ಅಂತ್ಯಸಂಸ್ಕಾರವನ್ನು ಶನಿವಾರ ನಡೆಸಲಾಯಿತು ಎಂದು ಗಾಝಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಅಲ್-ನಜ್ಜರ್ ಆಸ್ಪತ್ರೆಯಲ್ಲಿ, ಸಂಬಂಧಿಕರು ಬಿಳಿ ಬಟ್ಟೆಯಲ್ಲಿ ಸುತ್ತಿರುವ ಮಕ್ಕಳ ಮೃತದೇಹಗಳನ್ನು ಆಲಿಂಗಿಸಿ ದುಃಖಿಸಿದರು.
ಇಸ್ರೇಲ್ನ ವಾಯು ದಾಳಿಯಲ್ಲಿ ಮೃತಪಟ್ಟವರಲ್ಲಿ ಅಬ್ದುಲ್ ಫತ್ತಾಹ್ ಸೋಭಿ ರದ್ವಾನ್, ಅವರ ಪತ್ನಿ ನಜ್ಲಾ ಅಹ್ಮದ್ ಅವೇದಾ ಮತ್ತು ಅವರ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಬ್ದುಲ್ ಫತ್ತಾಹ್ ಸೋಭಿ ರದ್ವಾನ್ರ ಭಾವ ಅಹ್ಮದ್ ಬರ್ಹೂಮ್ ತಿಳಿಸಿದರು. ಬರ್ಹೂಮ್ ತನ್ನ ಪತ್ನಿ ರವನ್ ರದ್ವಾನ್ ಮತ್ತು ಐದು ವರ್ಷದ ಪುತ್ರಿ ಆಲಾರನ್ನು ಕಳೆದುಕೊಂಡಿದ್ದಾರೆ.
‘‘ಇದು ಯಾವುದೇ ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಇಲ್ಲದಿರುವ ಜಗತ್ತು’’ ಎಂದು ಮಗಳ ಮೃತದೇಹವನ್ನು ಹಿಡಿದುಕೊಂಡು ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬರ್ಹೂಮ್ ಹೇಳಿದರು.
‘‘ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಿರ್ವಸಿತ ಜನರಿಂದ ತುಂಬಿದ್ದ ಮನೆಯೊಂದರ ಮೇಲೆ ಅವರು ಬಾಂಬ್ ಹಾಕಿದ್ದಾರೆ. ಇಲ್ಲಿ ಹುತಾತ್ಮರಾಗಿರುವುದು ಮಹಿಳೆಯರು ಮತ್ತು ಮಕ್ಕಳು’’ ಎಂದರು.
‘‘ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು. ನಾವು ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಮಾತನಾಡಿದೆವು. ಅವರ ದೇಹದಲ್ಲಿ ದೊಡ್ಡ ಪ್ರಮಾಣದ ಗಾಯಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಅವರ ಗಾಯಗಳು ಎಷ್ಟು ದೊಡ್ಡದಾಗಿವೆಯೆಂದರೆ, ಅವರು ಈಗ ಬದುಕಿ ಉಳಿದರೂ ಮುಂದೆಯೂ ಬದುಕಿರುತ್ತಾರೆ ಎನ್ನುವ ಖಾತರಿಯಿಲ್ಲ. ಯಾಕೆಂದರೆ, ಅಷ್ಟು ದೊಡ್ಡ ಪ್ರಮಾಣದ ಗಾಯಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸದ್ಯಕ್ಕೆ ಇಲ್ಲಿಲ್ಲ’’ ಎಂದು ಬರ್ಹೂಮ್ ನುಡಿದರು.
ಇಸ್ರೇಲ್ ಸೇನೆಯು ರಫಾ ನಗರದಲ್ಲಿ ತನ್ನ ವಾಯು ದಾಳಿಯನ್ನು ಶನಿವಾರವೂ ಮುಂದುವರಿಸಿದೆ ಎಂದು ಅಲ್ ಜಝೀರ ವರದಿ ಮಾಡಿದೆ. ಅದು ತನ್ನ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ಅದು ತಿಳಿಸಿದೆ.
ಇಸ್ರೇಲ್ ಸೇನೆಯು ಶನಿವಾರ ಜಬಾಲಿಯ, ನುಸೇರತ್, ಮಝಾಝಿ ಮತ್ತು ಬುರೇಜ್ ನಿರಾಶ್ರಿತ ಶಿಬಿರಗಳು ಸೇರಿದಂತೆ ಗಾಝಾ ಪಟ್ಟಿಯ ಇತರ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಲ್ ಜಝೀರ ತಿಳಿಸಿದೆ.
ಅಕ್ಟೋಬರ್ 7ರಿಂದ ಗಾಝಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ 34,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 76,900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.