ಯೆಮನ್‍ನ ಬಂದರಿನ ಮೇಲೆ ಇಸ್ರೇಲ್ ದಾಳಿ: 9 ಮಂದಿ ಸಾವು
ಜೆರುಸಲೇಂ: ಯೆಮನ್‍ನಿಂದ ಪ್ರಯೋಗಿಸಲಾದ ಕ್ಷಿಪಣಿಯನ್ನು ತುಂಡರಿಸಿದ ಬಳಿಕ ಗುರುವಾರ ಬೆಳಿಗ್ಗೆ ಯೆಮನ್‍ನ ಬಂದರು ಹಾಗೂ ಇಂಧನ ತಾಣಗಳ ಮೇಲೆ ಇಸ್ರೇಲ್ ನಡೆಸಿದ ಪ್ರತೀಕಾರ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪಶ್ಚಿಮದ ಹೊಡೈಡಾ ಪ್ರಾಂತದ ಸಲೀಫ್ ಬಂದರಿನ ಬಳಿ ನಡೆದ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ ರಾಸ್ ಇಸಾ ತೈಲ ಘಟಕದ ಮೇಲೆ ನಡೆದ ದಾಳಿಯಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಸನಾದ ದಕ್ಷಿಣ ಮತ್ತು ಉತ್ತರದಲ್ಲಿರುವ ಎರಡು ವಿದ್ಯುತ್ ಸ್ಥಾವರಗಳ ಮೇಲೆಯೂ ದಾಳಿ ನಡೆದಿದೆ ಎಂದು ಹೌದಿ ಬಂಡುಕೋರರ ಸ್ವಾಮ್ಯದ ಅಲ್ ಮಸೀರಾ ಟಿವಿ ವರದಿ ಮಾಡಿದೆ.
ಯೆಮನ್‍ನಿಂದ ಇಸ್ರೇಲ್‍ನತ್ತ ಕ್ಷಿಪಣಿಯನ್ನು ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ಯೆಮನ್ ರಾಜಧಾನಿ ಸನಾದಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಬಂದರು, ಇಂಧನ ಘಟಕಗಳನ್ನು ಗುರಿಯಾಗಿಸಿ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಈ ವಾರ ಇಸ್ರೇಲ್ ಮೇಲೆ ಹೌದಿಗಳು ನಡೆಸಿದ ಎರಡನೇ ಕ್ಷಿಪಣಿ ದಾಳಿ ಇದಾಗಿದೆ. ಸೋಮವಾರ ಇಸ್ರೇಲ್‍ನ ಟೆಲ್‍ಅವೀವ್ ನಗರದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ಹೌದಿಗಳಿಂದ ಕ್ಷಿಪಣಿ ದಾಳಿ ನಡೆದಿತ್ತು. ಇದೇ ದಿನ ಯೆಮನ್‍ನಿಂದ ಇಸ್ರೇಲ್‍ನತ್ತ ಹಾರಿ ಬಂದ ಡ್ರೋನ್ ಒಂದನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ಇಸ್ರೇಲ್ ನೌಕಾಪಡೆಯ ಕ್ಷಿಪಣಿ ನೌಕೆ ತುಂಡರಿಸಿತ್ತು. ಡಿಸೆಂಬರ್ 9ರಂದು ಹೌದಿಗಳು ಉಡಾಯಿಸಿದ ಡ್ರೋನ್ ಮಧ್ಯ ಇಸ್ರೇಲ್‍ನ ಯಾವ್ನೆ ನಗರದ ವಸತಿ ಕಟ್ಟಡದ ಮೇಲಿನ ಮಹಡಿಯಲ್ಲಿ ಸ್ಫೋಟಿಸಿದೆ ಎಂದು ವರದಿಯಾಗಿದೆ.
`ಇಸ್ರೇಲ್‍ನ ದೀರ್ಘವಾದ ಬಾಹು ನಿಮ್ಮನ್ನು ಕೂಡಾ ತಲುಪಬಲ್ಲದು' ಎಂದು ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿನ ಮುಖಂಡರಿಗೆ ಇಸ್ರೇಲ್‍ನ ರಕ್ಷಣಾ ಸಚಿವ ಇಸ್ರಾಯೆಲ್ ಕಾಟ್ಝ್ ಎಚ್ಚರಿಕೆ ನೀಡಿದ್ದಾರೆ.