ಹೌದಿಗಳ ಕ್ಷಿಪಣಿ ಸಿಡಿತಲೆಯಿಂದ ಟೆಲ್‍ಅವೀವ್‍ನಲ್ಲಿ ಶಾಲೆ ನೆಲಸಮ
ಜೆರುಸಲೇಂ: ಯೆಮನ್‍ನಿಂದ ಇಸ್ರೇಲ್‍ನ ಟೆಲ್‍ಅವೀವ್‍ನತ್ತ ಹೌದಿಗಳು ಪ್ರಯೋಗಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತುಂಡರಿಸಲಾಗಿದ್ದರೂ ಕ್ಷಿಪಣಿಯ ಸಿಡಿತಲೆ ಅಪ್ಪಳಿಸಿ ರಮತ್ ಗಾನ್ ನಗರದಲ್ಲಿರುವ ಬಹುಮಹಡಿ ಶಾಲಾ ಕಟ್ಟಡವೊಂದು ಧ್ವಂಸಗೊಂಡಿದೆ ಎಂದು ನಗರದ ಮೇಯರ್ ಹೇಳಿದ್ದಾರೆ.
ಧ್ವಂಸಗೊಂಡಿರುವ ಶಾಲೆಯ ಕಟ್ಟಡವನ್ನು ಮರು ನಿರ್ಮಿಸಲಾಗುವುದು. ಬುಧವಾರ ತಡರಾತ್ರಿ ದಾಳಿ ನಡೆದಿರುವುದರಿಂದ ಶಾಲೆಯಲ್ಲಿ ಮಕ್ಕಳು ಇರಲಿಲ್ಲ. ಸುಮಾರು 11 ದಶಲಕ್ಷ ಡಾಲರ್‍ನಷ್ಟು ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದ್ದು ತಾತ್ಕಾಲಿಕವಾಗಿ ಶಾಲೆಯನ್ನು ಸಮೀಪದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿರುವುದಾಗಿ ನಗರದ ಮೇಯರ್ ಕಾರ್ಮೆಲ್ ಶಾಮಾ ಹಕೊಹೆನ್ ಹೇಳಿದ್ದಾರೆ.
ಯೆಮನ್‍ನಿಂದ ಕ್ಷಿಪಣಿ ದಾಳಿಯ ಮುನ್ಸೂಚನೆಯಾಗಿ ಸೈರನ್‍ಗಳನ್ನು ಮೊಳಗಿಸಲಾಗಿದ್ದು ನಾಗರಿಕರು ಬಾಂಬ್ ನಿರೋಧಕ ಆಶ್ರಯ ತಾಣದತ್ತ ಧಾವಿಸಿದರು. ಕ್ಷಿಪಣಿಯನ್ನು ತುಂಡರಿಸಲಾದರೂ ಅದರ ಸಿಡಿತಲೆ ಹಾಗೂ ಅವಶೇಷಗಳು ಶಾಲೆಯ ಮುಖ್ಯ ಕಟ್ಟಡದ ಮೇಲೆ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.