ಬಾಂಗ್ಲಾದೇಶ | ಉಲ್ಫಾ ಮುಖ್ಯಸ್ಥ ಪರೇಶ್ ಬರೂವಾ ಮರಣದಂಡನೆ ಶಿಕ್ಷೆ ರದ್ದು
ಢಾಕಾ : ಅಸ್ಸಾಂ ಪ್ರತ್ಯೇಕತಾವಾದಿ ಗುಂಪು ಉಲ್ಫಾ- ಐ ಮುಖ್ಯಸ್ಥ ಪರೇಶ್ ಬರೂವಾಗೆ 2004ರ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಬಾಂಗ್ಲಾದೇಶ ರದ್ದುಗೊಳಿಸಿದ್ದು 10 ವರ್ಷದ ಜೈಲು ಶಿಕ್ಷೆಗೆ ಬದಲಾಯಿಸಿದೆ.
ಜತೆಗೆ, ಮಾಜಿ ಗೃಹ ಸಚಿವ ಲುಟ್ಟೊಝಮನ್ ಬಾಬರ್ ಮತ್ತು ಇತರ ಐವರನ್ನು ಬಾಂಗ್ಲಾದೇಶ ಹೈಕೋರ್ಟ್ ಪೀಠ ಬುಧವಾರ ಮರಣದಂಡನೆಯಿಂದ ಖುಲಾಸೆಗೊಳಿಸಿದೆ. 2004ರ ಎಪ್ರಿಲ್ 1ರಂದು ಚಟ್ಟೋಗ್ರಾಮ್ ಬಂದರಿನಲ್ಲಿ ಕಳ್ಳಸಾಗಣೆ ಮಾಡಿದ್ದ 10 ಟ್ರಕ್ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿತ್ತು. ಈ ಶಸ್ತ್ರಾಸ್ತ್ರಗಳನ್ನು ಭಾರತದಿಂದ ಅಸ್ಸಾಂ ಪ್ರತ್ಯೇಕಗೊಂಡು ಸ್ವತಂತ್ರ ದೇಶವಾಗಬೇಕೆಂದು ಪ್ರತಿಪಾದಿಸುತ್ತಿದ್ದ ಉಲ್ಫಾ-ಐ(ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಮ್-ಇಂಡಿಪೆಂಡೆಂಟ್) ಗುಂಪಿಗೆ ತಲುಪಿಸುವ ಉದ್ದೇಶವಿತ್ತು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
ಢಾಕಾದಲ್ಲಿ ವಾಸಿಸುತ್ತಿದ್ದ ಉಲ್ಫಾ-ಐ ಮಿಲಿಟರಿ ವಿಭಾಗದ ಮುಖ್ಯಸ್ಥ ಪರೇಶ್ ಬರೂವಾ ಸೇರಿದಂತೆ 10 ಮಂದಿಯ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಮತ್ತು ವಿಶೇಷಾಧಿಕಾರ ಕಾಯಿದೆಯಡಿ ಚಟ್ಟೋಗ್ರಾಮ್‍ನ ಕರ್ಣಫುಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2014ರ ಜನವರಿ 30ರಂದು ಪರೇಶ್ ಬರೂವಾ, ಮಾಜಿ ಕೈಗಾರಿಕಾ ಸಚಿವ ಇಸ್ಲಾಮಿ ಅಮೀರ್ ರಹ್ಮಾನ್ ನಿಝಾಮಿ, ಬಾಬರ್, ಪರೇಶ್ ಬರೂವಾ ಹಾಗೂ ಗುಪ್ತಚರ ಏಜೆನ್ಸಿಯ ಇಬ್ಬರು ಮುಖ್ಯಸ್ಥರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಿಗಳಿಗೆ ಪ್ರತ್ಯೇಕವಾಗಿ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿತ್ತು. ತೀರ್ಪನ್ನು ಪ್ರಶ್ನಿಸಿ 2014ರಲ್ಲಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.