ನಿಜ್ಜಾರ್ ಹತ್ಯೆಗೆ ರಶ್ಯ ರಾಯಭಾರ ಕಚೇರಿಯ ನೆರವು : ಪನ್ನೂನ್ ಆರೋಪ
ಒಟ್ಟಾವ : ಕೆನಡಾದಲ್ಲಿರುವ ರಶ್ಯದ ರಾಯಭಾರ ಕಚೇರಿಯು ಭಾರತೀಯ ಅಧಿಕಾರಿಗಳೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಸುಗಮಗೊಳಿಸಿದೆ ಎಂದು ಸಿಖ್ಸ್ ಫಾರ್ ಜಸ್ಟಿಸ್ (ಎಸ್‍ಎಫ್‍ಜೆ) ಆರೋಪಿಸಿದೆ.
ಕೆನಡಾದಲ್ಲಿ `ರಾ'(ಭಾರತದ ಗುಪ್ತಚರ ಏಜೆನ್ಸಿ) ಮುಖ್ಯಸ್ಥರಾಗಿದ್ದ ಪವನ್ ಕುಮಾರ್ ರೈಗೆ ಒದಗಿಸಿದ್ದಾರೆ ಎಂದು ಎಸ್‍ಎಫ್‍ಜೆ ಪ್ರತಿಪಾದಿಸಿದೆ. ಪವನ್ ಕುಮಾರ್ ರನ್ನು ಕೆನಡಾ ಸರಕಾರ ದೇಶದಿಂದ ಉಚ್ಛಾಟಿಸಿದೆ.
ಖಾಲಿಸ್ತಾನ್ ಪರ ಸಿಖ್ಖರ ವಿರುದ್ಧ ನರೇಂದ್ರ ಮೋದಿಯವರ ಭಾರತಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬೆಂಬಲವು ರಶ್ಯಕ್ಕೆ ಮರಣ ಶಾಸನವಾಗಲಿದೆ ಎಂದು ಎಸ್‍ಎಫ್‍ಜೆ ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಎಚ್ಚರಿಕೆ ನೀಡಿದ್ದು `ಕೆನಡಾದಲ್ಲಿ ರಶ್ಯದ ರಾಯಭಾರಿ ವ್ಲಾದಿಮಿರ್ ಸೆವಾಸ್ಟ್ಯನೊವಿಚ್ ಹಾಗೂ ಅಮೆರಿಕದಲ್ಲಿ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾರ `ಸಾರ್ವಜನಿಕ ಕಾರ್ಯಕ್ರಮದ ' ಬಗ್ಗೆ ಮಾಹಿತಿ ನೀಡುವವರಿಗೆ 25,000 ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಸ್ಟೆಫನೋವ್ ಜತೆಗಿನ ಸಮನ್ವಯದಲ್ಲಿ ಕ್ವಾಟ್ರಾ ಅಮೆರಿಕ ಮತ್ತು ಕೆನಡಾದಲ್ಲಿ ಕಣ್ಗಾವಲು ಮತ್ತು ಗೂಢಚರ್ಯೆ ಜಾಲವನ್ನು ನಡೆಸುತ್ತಿದ್ದಾರೆ. 2023ರ ಮೇ ತಿಂಗಳಿನಲ್ಲಿ ಒಟ್ಟಾವದಲ್ಲಿರುವ ರಶ್ಯದ ರಾಯಭಾರ ಕಚೇರಿಯು ನಿಜ್ಜಾರ್‍ನ ಟೆಲಿಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ, ಆತನ ಚಲನವಲನದ ಬಗ್ಗೆ ಭಾರತಕ್ಕೆ ಮಾಹಿತಿ ಒದಗಿಸಿದೆ. ಪರಿಣಾಮವಾಗಿ ಜೂನ್ 18ರಂದು ಸರ್ರೆಯಲ್ಲಿನ ಗುರುನಾನಕ್ ಸಿಂಗ್ ಗುರುದ್ವಾರದಲ್ಲಿ ನಿಜ್ಜಾರ್‍ನ ಹತ್ಯೆಯಾಗಿದೆ ಎಂದು ಪನ್ನೂನ್ ಹೇಳಿದ್ದಾನೆ.