ಭ್ರಷ್ಟಾಚಾರ ಪ್ರಕರಣ: ಮಾಜಿ ಉನ್ನತ ಅಧಿಕಾರಿಯನ್ನು ಗಲ್ಲಿಗೇರಿಸಿದ ಚೀನಾ

Update: 2024-12-18 04:54 GMT

ಸಾಂದರ್ಭಿಕ ಚಿತ್ರ | PTI

ಬೀಜಿಂಗ್: ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲ್ಪಟ್ಟಿದ್ದ ಸ್ವಾಯತ್ತ ಮಂಗೊಲಿಯಾ ಉತ್ತರ ಒಳನಾಡು ಪ್ರಾಂತ್ಯದ ಮಾಜಿ ಉನ್ನತ ಅಧಿಕಾರಿ ಲಿ ಜಿಯಾನ್‌ಪಿಂಗ್ ಅವರನ್ನು ಚೀನಾವು ಗಲ್ಲಿಗೇರಿಸಿದೆ.

ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹೊಹೊಟ್ ಆರ್ಥಿಕ ಹಾಗೂ ತಂತ್ರಜ್ಞಾನ ಅಭಿವೃದ್ಧಿ ವಲಯದ ಕ್ರಿಯಾ ಸಮಿತಿಯ ಮಾಜಿ ಕಾರ್ಯದರ್ಶಿಯಾದ ಲಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯೆಂದು 2022ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ತೀರ್ಪು ನೀಡಿತ್ತು. ಈ ಸಂಬಂಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ಉನ್ನತ ನ್ಯಾಯಾಲಯವು 2024ರ ಆಗಸ್ಟ್‌ನಲ್ಲಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.

ಸರ್ವೋಚ್ಚ ಜನತಾ ನ್ಯಾಯಾಲಯದ ಅನುಮೋದನೆಯೊಂದಿಗೆ ಮಂಗೊಲಿಯಾ ಒಳನಾಡಿನ ನ್ಯಾಯಾಲಯವು ಮರಣದಂಡನೆಯನ್ನು ಜಾರಿಗೊಳಿಸಿದೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

64 ವರ್ಷ ವಯಸ್ಸಿನ ಲಿ ಜಿಯಾನ್‌ಪಿಂಗ್ ಅವರು 300 ಬಿಲಿಯನ್ ಯುವಾನ್ (421 ಮಿಲಿಯಕ್ಕೂ ಅಧಿಕ ಮೌಲ್ಯದ ಅಮೆರಿಕನ್ ಡಾಲರ್) ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ ಪ್ರಕರಣದಲ್ಲಿ ದೋಷಿಯೆಂದು ಮಾಧ್ಯಮಿಕ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು. ಚೀನಾದ ಇತಿಹಾಸದಲ್ಲೇ ಅತಿ ದೊಡ್ಡ ಭ್ರಷ್ಟಾಚಾರ ಪ್ರಕರಣ ಇದಾಗಿದೆ.

2012ರಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರು ಭ್ರಷ್ಟಾಚಾರದ ವಿರುದ್ಧ ಅಭಿಯಾನನ್ನು ಘೋಷಿಸಿದ್ದರು.

ಈ ಅಭಿಯಾನದಲ್ಲಿ ಇಬ್ಬರು ರಕ್ಷಣಾ ಸಚಿವರುಗಳು ಹಾಗೂ 10 ಲಕ್ಷಕ್ಕೂ ಅಧಿಕ ಪಕ್ಷದ ಪದಾಧಿಕಾರಿಗಳು ಮತ್ತು ಸೇನಾಧಿಕಾರಿಗಳನ್ನು ಶಿಕ್ಷಿಸಲಾಗಿದೆ ಹಾಗೂ ಕಾನೂನುಕ್ರಮಕ್ಕೊಳಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News