ರಶ್ಯ ಅಣ್ವಸ್ತ್ರ ಪಡೆಯ ವರಿಷ್ಠರ ಹತ್ಯೆ ಘಟನೆ: ಶಂಕಿತನ ಬಂಧನ
ಮಾಸ್ಕೋ : ರಶ್ಯದ ಅಣ್ವಸ್ತ್ರ ಪಡೆಗಳ ವರಿಷ್ಠ ಇಗೋರ್ ಕಿರಿಲೋವ್ ಹತ್ಯೆ ಘಟನೆಗೆ ಸಂಬಂಧಿಸಿ ಉಜ್ಬೇಕಿಸ್ತಾನದ ಪ್ರಜೆಯನ್ನು ಬಂಧಿಸಲಾಗಿದೆ. ಉಕ್ರೇನ್‍ನ ರಹಸ್ಯ ಸೇವಾ ಇಲಾಖೆಯ ಸೂಚನೆಯ ಮೇರೆಗೆ ಹತ್ಯೆ ನಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ರಶ್ಯದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಮಾಸ್ಕೋದಲ್ಲಿ ಮಂಗಳವಾರ ನಡೆದ ಸ್ಫೋಟದಲ್ಲಿ ರಶ್ಯದ ಜೈವಿಕ, ಅಣ್ವಸ್ತ್ರ ಮತ್ತು ರಾಸಾಯನಿಕ ರಕ್ಷಣಾ ಪಡೆಗಳ ವರಿಷ್ಠ ಲೆ|ಜ| ಇಗೋರ್ ಕಿರಿಲೋವ್ ಹಾಗೂ ಅವರ ಸಹಾಯಕ ಮೃತಪಟ್ಟಿದ್ದರು. ಉಕ್ರೇನ್‍ನ ಎಸ್‍ಬಿಯು ಗುಪ್ತಚರ ಸೇವೆಯು ಇಗೋರ್ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿದ್ದು ಉಕ್ರೇನ್ ಪಡೆಗಳ ವಿರುದ್ಧ ರಾಸಾಯನಿಕ ಅಸ್ತ್ರಗಳ ಬಳಕೆಗೆ ಇಗೋರ್ ಜವಾಬ್ದಾರರಾದ್ದರಿಂದ ಹತ್ಯೆ ನಡೆಸಲಾಗಿದೆ ಎಂದು ಹೇಳಿದೆ.
ಹತ್ಯೆಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ತನಗೆ 1 ಲಕ್ಷ ಡಾಲರ್ ಹಣ ಮತ್ತು ಯುರೋಪಿಯನ್ ದೇಶದಲ್ಲಿ ವಾಸ್ತವ್ಯದ ಕೊಡುಗೆ ನೀಡಲಾಗಿತ್ತು . ಮಾಸ್ಕೋಕ್ಕೆ ಬಂದ ಬಳಿಕ ತನಗೆ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಒದಗಿಸಲಾಗಿದೆ. ಇದನ್ನು ಇಗೋರ್ ವಾಸಿಸುವ ಅಪಾರ್ಟ್‍ಮೆಂಟ್‍ನ ಹೊರಗಡೆ ಇದ್ದ ಇಲೆಕ್ಟ್ರಾನಿಕ್ ಸ್ಕೂಟರ್ ನಲ್ಲಿ ಇರಿಸಿದ್ದೇನೆ. ಈ ಸ್ಕೂಟರ್ ನ ಬದಿಯಲ್ಲಿ ಬಾಡಿಗೆಗೆ ಗೊತ್ತುಪಡಿಸಿದ್ದ ಕಾರಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಉಕ್ರೇನ್‍ನ ನಿಪ್ರೋ ನಗರದಲ್ಲಿದ್ದ ಹತ್ಯೆಯ ಸಂಘಟಕರು ಇದನ್ನು ಬಳಸಿಕೊಂಡು ಇಗೋರ್ ತನ್ನ ಮನೆಯಿಂದ ಹೊರಬಿದ್ದು ಸ್ಕೂಟರ್ ನ ಬಳಿ ಬರುತ್ತಿದ್ದಂತೆಯೇ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟ ನಡೆಸಲಾಗಿದೆ ಎಂದು ಎಂದು ಶಂಕಿತ ಆರೋಪಿ ವಿಚಾರಣೆ ಸಂದರ್ಭ ಮಾಹಿತಿ ನೀಡಿರುವುದಾಗಿ ಘಟನೆಯ ತನಿಖೆ ನಡೆಸುತ್ತಿರುವ ತಂಡ ಹೇಳಿದೆ. ಬಾಂಬ್ ಸ್ಫೋಟದಲ್ಲಿ ಇನ್ನೂ ಕೆಲವರು ಒಳಗೊಂಡಿರುವ ಸಾಧ್ಯತೆಯಿದ್ದು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.