ಸಿರಿಯಾದಲ್ಲಿ ತೀವ್ರಗೊಂಡ ಮಾನವೀಯ ಬಿಕ್ಕಟ್ಟು | ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳವಳ
ವಿಶ್ವಂಸ್ಥೆ : ಸಿರಿಯಾದಲ್ಲಿನ ಮಾನವೀಯ ಬಿಕ್ಕಟ್ಟು ಜಗತ್ತಿನ ಅತ್ಯಂತ ತೀವ್ರ ಪ್ರಮಾಣದ ಸಂಕಷ್ಟವಾಗಿಯೇ ಮುಂದುವರಿದಿದ್ದು ಸುಮಾರು 1.7 ಕೋಟಿ ಜನರಿಗೆ ತುರ್ತು ನೆರವಿನ ಅಗತ್ಯವಿದೆ. 70 ಲಕ್ಷಕ್ಕೂ ಅಧಿಕ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿಯೇ ಬದುಕುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಟಾಮ್ ಪ್ಲೆಚರ್ ಹೇಳಿದ್ದಾರೆ.
ಸಿರಿಯಾದಲ್ಲಿನ ಸುಮಾರು 1.3 ಕೋಟಿಯಷ್ಟು ಜನರಿಗೆ ತೀವ್ರ ಆಹಾರದ ಅಭದ್ರತೆ ಎದುರಾಗಿದ್ದು ಸಿರಿಯಾದಲ್ಲಿನ ಇತ್ತೀಚಿನ ಘಟನೆಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಸಾದ್ ಆಡಳಿತದ ಪತನದ ಬಳಿಕ ಎರಡು ವಾರದೊಳಗೆ 10 ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ಕನಿಷ್ಠ 80 ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆರೋಗ್ಯ ಸೇವೆಗಳು ಮತ್ತು ನೀರು ಸರಬರಾಜು ಸ್ಥಗಿತಗೊಂಡಿದೆ. ಸುಮಾರು 12,000 ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಗಡಿಗಳು ಹಾಗೂ ವಾಣಿಜ್ಯ ಮಾರ್ಗಗಳನ್ನು ಮುಚ್ಚಲಾಗಿರುವುದರಿಂದ ಆಹಾರ ಮತ್ತು ಇಂಧನದ ತೀವ್ರ ಕೊರತೆ ಎದುರಾಗಿದೆ. ಹೆಚ್ಚಿನ ಸಂಸ್ಥೆಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರೊಂದಿಗೆ ಮಾನವೀಯ ಬೆಂಬಲದ ಹರಿವಿಗೆ ತೀವ್ರ ಅಡ್ಡಿಯಾಗಿದೆ. ಗೋದಾಮುಗಳನ್ನು ಲೂಟಿ ಮಾಡಲಾಗಿದ್ದು ಹಲವು ಮಾನವೀಯ ನೆರವಿನ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ' ಎಂದು ಫ್ಲೆಚರ್ ಹೇಳಿದ್ದಾರೆ.
`ವಿಶ್ವದಲ್ಲಿ ಅತೀ ಹೆಚ್ಚಿನ ನೆರವನ್ನು ಎದುರು ನೋಡುತ್ತಿರುವ ದೇಶಕ್ಕೆ ಅತೀ ಕನಿಷ್ಠ ನೆರವು ಪೂರೈಕೆಯಾಗುತ್ತಿರುವುದು ವಿಪರ್ಯಾಸವಾಗಿದೆ. 2024ರಲ್ಲಿ ಕೇವಲ 2 ವಾರಗಳು ಮಾತ್ರ ಉಳಿದಿದ್ದು ಸಿರಿಯಾಕ್ಕೆ ನೆರವು ಪೂರೈಕೆ ಹೆಚ್ಚಿಸಲು ಇದು ಸಕಾಲವಾಗಿದೆ ಎಂದು ಫ್ಲೆಚರ್ ಹೇಳಿದ್ದಾರೆ.
ಸಿರಿಯಾ ರಾಜಧಾನಿ ದಮಾಸ್ಕಸ್‍ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಪಾಲ್ಗೊಂಡ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗೈರ್ ಪೆಡರ್ಸನ್ ಸಿರಿಯಾಕ್ಕೆ ಅಂತರಾಷ್ಟ್ರೀಯ ಸಮುದಾಯದ ವ್ಯಾಪಕ ಬೆಂಬಲ ಮತ್ತು ಸಿರಿಯಾದ ವಿರುದ್ಧದ ಆರ್ಥಿಕ ನಿರ್ಬಂಧ ತೆರವಿಗೆ ಆಗ್ರಹಿಸಿದರು. 14 ವರ್ಷಗಳ ಅಂತರ್ಯುದ್ಧದ ಬಳಿಕ ಇದೀಗ ಸಿರಿಯಾದ ಮರು ನಿರ್ಮಾಣಕ್ಕೆ ಬೆಂಬಲ ನೀಡಲು ಅಂತರಾಷ್ಟ್ರೀಯ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಸಿರಿಯಾವು ಅಗತ್ಯವಿರುವ ಆರ್ಥಿಕ ಬೆಂಬಲ ಪಡೆಯುವುದನ್ನು ಖಾತರಿಪಡಿಸಲು ಅಂತರ್ಗತ ರಾಜಕೀಯ ಸ್ಥಿತ್ಯಂತರ ಬಹುಮುಖ್ಯವಾಗಿದೆ ಎಂದವರು ಹೇಳಿದ್ದಾರೆ. ಹಿಂದಿನ ಸರಕಾರದ ಮಂತ್ರಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಒಳಗೊಂಡಂತೆ ದೇಶದಲ್ಲಿ ಕ್ರಮಬದ್ಧವಾದ ಮತ್ತು ಶಾಂತಿಯುತ ಅಧಿಕಾರದ ಪರಿವರ್ತನೆಯನ್ನು ಸಾಧಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿವರ್ತನೆಯು ವಿಶ್ವಾಸಾರ್ಹ ಮತ್ತು ಅಂತರ್ಗತವಾಗಿರಬೇಕು. ಸಿರಿಯಾ ಸಮಾಜದ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿರಬೇಕು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸಬೇಕು. ಇದೇ ಸಂದರ್ಭ ಹೊಸ ಸಂವಿಧಾನದ ರಚನೆ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಅಗತ್ಯವೂ ಇದೆ ಎಂದು ಪೆಡರ್ಸನ್ ಪ್ರತಿಪಾದಿಸಿದ್ದಾರೆ.
►ಸಿರಿಯಾದ್ಯಂತ ದಾಳಿ ನಿಲ್ಲಿಸಲು ಇಸ್ರೇಲ್‍ಗೆ ವಿಶ್ವಸಂಸ್ಥೆ ಆಗ್ರಹ
ಬಶರ್ ಅಸ್ಸಾದ್ ಆಡಳಿತ ಪದಚ್ಯುತಗೊಂಡಂದಿನಿಂದ ಸಿರಿಯಾದ್ಯಂತ ಮಿಲಿಟರಿ ವ್ಯವಸ್ಥೆಗಳು, ಸಾಧನಗಳು ಹಾಗೂ ಪೂರೈಕೆ ಕೇಂದ್ರಗಳ ಮೇಲೆ 350ಕ್ಕೂ ಹೆಚ್ಚು ದಾಳಿಗಳನ್ನು ಇಸ್ರೇಲ್ ನಡೆಸಿದ್ದು ದಾಳಿಗಳು ಮುಂದುವರಿದಿವೆ.
ಸಿರಿಯಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸಬೇಕು. ಇಂತಹ ದಾಳಿಗಳು ಜರ್ಜರಿತ ನಾಗರಿಕ ಸಮುದಾಯವನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಕ್ರಮಬದ್ಧವಾದ ರಾಜಕೀಯ ಪರಿವರ್ತನೆಯ ನಿರೀಕ್ಷೆಗಳನ್ನು ದುರ್ಬಲಗೊಳಿಸುತ್ತದೆ . ಆಕ್ರಮಿತ ಗೋಲನ್ ಹೈಟ್ಸ್ ನಲ್ಲಿ ಇಸ್ರೇಲ್ ಅಧಿಕಾರಿಗಳು ಅಕ್ರಮ ವಸಾಹತು ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗೈರ್ ಪೆಡರ್ಸನ್ ಆಗ್ರಹಿಸಿದ್ದಾರೆ.