ಗಾಝಾದ ಉತ್ತರ, ದಕ್ಷಿಣದಲ್ಲಿ ಇಸ್ರೇಲ್ ದಾಳಿ: ವರದಿ
ಗಾಝಾ : ಉತ್ತರ ಮತ್ತು ದಕ್ಷಿಣ ಗಾಝಾದಲ್ಲಿ ತನ್ನ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು ಶೆಜೈಯಾ ನಗರದಲ್ಲಿ ನಡೆಸಿದ ನಿಖರ ವೈಮಾನಿಕ ದಾಳಿಯಲ್ಲಿ ಹಮಾಸ್‍ನ 40 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.
ಉತ್ತರ ಗಾಝಾದ ಶೆಜೈಯಾ ನಗರದಲ್ಲಿ ಮತ್ತು ಮಧ್ಯ ರಾಫಾದಲ್ಲಿ ಇಸ್ರೇಲ್ ಬಾಂಬ್‍ದಾಳಿಯಲ್ಲಿ ಕನಿಷ್ಟ 6 ಪೆಲೆಸ್ತೀನೀಯರು ಮೃತಪಟ್ಟಿದ್ದು ಹಲವು ಮನೆಗಳು ಧ್ವಂಸಗೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಗಾಝಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್‍ಗೆ ಭಾರೀ ನಷ್ಟವಾಗಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮಿಲಿಟರಿ ಮೂಲಸೌಕರ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ತನ್ನ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಎಂದು ಐಡಿಎಫ್ ಹೇಳಿದೆ.
ಶೆಜೈಯಾ ಮತ್ತು ರಫಾದಲ್ಲಿ ಭಾರೀ ಹೋರಾಟ ನಡೆಯುತ್ತಿದ್ದು ತನ್ನ ಪಡೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾಗೂ ಮೋರ್ಟರ್ ಬಾಂಬ್‍ಗಳನ್ನು ಪ್ರಯೋಗಿಸಿ ಇಸ್ರೇಲ್ ಪಡೆಯನ್ನು ಹಿಮ್ಮೆಟ್ಟಿಸಿದೆ ಎಂದು ಹಮಾಸ್ ಹೇಳಿದೆ.
ಈ ಮಧ್ಯೆ, ಗಾಝಾದಲ್ಲಿ ಕದನ ವಿರಾಮಕ್ಕೆ ನಡೆಸುತ್ತಿರುವ ಸಂಧಾನ ಪ್ರಯತ್ನ ಇದುವರೆಗೆ ಫಲ ನೀಡಿಲ್ಲ. ಯಾವುದೇ ಕದನ ವಿರಾಮ ಒಪ್ಪಂದವು ಯುದ್ಧವನ್ನು ಅಂತ್ಯಗೊಳಿಸುವ ಮತ್ತು ಗಾಝಾದಿಂದ ಇಸ್ರೇಲ್‍ನ ಪಡೆಗಳ ಸಂಪೂರ್ಣ ಹಿಂದೆ ಸರಿಯುವ ಅಂಶವನ್ನು ಹೊಂದಿರಬೇಕು ಎಂದು ಹಮಾಸ್ ಆಗ್ರಹಿಸುತ್ತಿದೆ. ಗಾಝಾದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಮಾತ್ರ ತನ್ನ ಒಪ್ಪಿಗೆಯಿದೆ. ಗಾಝಾದಿಂದ ಹಮಾಸ್ ಅನ್ನು ಹಿಮ್ಮೆಟ್ಟಿಸುವ ಸಂಕಲ್ಪಕ್ಕೆ ತಾನು ಬದ್ಧ ಎಂದು ಇಸ್ರೇಲ್ ಪಟ್ಟುಹಿಡಿದಿದೆ.