ವೆಸ್ಟ್ ಬ್ಯಾಂಕ್: Al Jazeera ಮಾಧ್ಯಮ ಕಚೇರಿ ಮೇಲೆ ಇಸ್ರೇಲ್ ಮಿಲಿಟರಿಯಿಂದ ದಾಳಿ; ಪ್ರಸಾರ ಸ್ಥಗಿತಕ್ಕೆ ಆದೇಶ
ಕೈರೋ: ಇಸ್ರೇಲ್ ಮಿಲಿಟರಿ ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್ ನಗರದಲ್ಲಿನ ಅಲ್ ಜಝೀರಾ ಮಾಧ್ಯಮ ಕಚೇರಿಗೆ ದಾಳಿ ನಡೆಸಿದ್ದು, 45 ದಿನಗಳವರೆಗೆ ಪ್ರಸಾರ ನಿಲ್ಲಿಸುವಂತೆ ಸೂಚಿಸಿದೆ ಎಂದು Al Jazeera ಟಿವಿ ವರದಿ ಮಾಡಿದೆ.
ಭಾರೀ ಶಸ್ತ್ರಸಜ್ಜಿತರಾಗಿದ್ದ ಇಸ್ರೇಲ್ ಸೈನಿಕರು ವೆಸ್ಟ್ ಬ್ಯಾಂಕ್ ನಗರವಾದ ರಮಲ್ಲಾದಲ್ಲಿ ಅಲ್ ಜಝೀರಾ ಬ್ಯೂರೋ ಮೇಲೆ ದಾಳಿ ನಡೆಸಿದ್ದಾರೆ. ಇಸ್ರೇಲ್ ಪಡೆಗಳು ಚಾನೆಲ್‌ನ ಕಚೇರಿಗೆ ನುಗ್ಗಿ ಕಾರ್ಯಕ್ರಮ ಪ್ರಸಾರವನ್ನು ನಿಲ್ಲಿಸುವಂತೆ ಸಿಬ್ಬಂದಿಗೆ ಆದೇಶದ ಪ್ರತಿಯನ್ನು ನೀಡುವ ದೃಶ್ಯವನ್ನು ಕತಾರ್ ಮೂಲದ ಅಲ್ ಜಝೀರಾ ವಾಹಿನಿ ವರದಿ ಮಾಡಿದೆ.
ಇಸ್ರೇಲ್ ಮಿಲಿಟರಿಯ ಈ ನಡೆಯನ್ನು ಫೆಲೆಸ್ತೀನ್ ಪತ್ರಕರ್ತರ ಸಂಘ ಖಂಡಿಸಿದೆ. ಈ ಆದೇಶವು ಪತ್ರಿಕೋದ್ಯಮ ಮತ್ತು ಮಾಧ್ಯಮ ಸ್ವಾತಂತ್ರ್ಯದ ಹರಣವಾಗಿದೆ. ಫೆಲೆಸ್ತೀನ್ ಜನರ ಮೇಲೆ ನಡೆಸುತ್ತಿದ್ದ ಆಕ್ರಮಣವನ್ನು ಬಹಿರಂಗಪಡಿಸುವ ಸುದ್ದಿವಾಹಿನಿ ಮೇಲೆ ದಾಳಿ ಸ್ವೀಕಾರಾರ್ಹವಲ್ಲ ಎಂದು ಪತ್ರಕರ್ತರ ಸಂಘ ಹೇಳಿದೆ.
ಮೇ ತಿಂಗಳಲ್ಲಿ ಇಸ್ರೇಲ್ ಅಲ್ ಜಝೀರಾ ಟಿವಿ ಪ್ರಸಾರ ಕಾರ್ಯವನ್ನು ಸ್ಥಗಿತಗೊಳಿಸಲು ಆದೇಶಿದ ಬಳಿಕ ಜೆರುಸಲೆಮ್ ನಲ್ಲಿ ಅಲ್ ಜಝೀರಾ ಟಿವಿ ಕಚೇರಿ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ನಡೆಸಿತ್ತು.