ಭಾರತದಿಂದ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕಾತಿಗೆ ಇಸ್ರೇಲ್ ನಿರ್ಧಾರ
ಜೆರುಸಲೇಂ: ಗಾಝಾ ಸಂಘರ್ಷದ ಬಳಿಕ ಇಸ್ರೇಲ್ ನ ಕಟ್ಟಡ ನಿರ್ಮಾಣ ಕ್ಷೇತ್ರವು ಕಾರ್ಮಿಕರ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಅದನ್ನು ನೀಗಿಸಲು ಭಾರತದಿಂದ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನು ತರಿಸಿಕೊಳ್ಳಲು ಇಸ್ರೇಲ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಳೆದ ವಾರ ‘ಆಯ್ಕೆಗಾರರ’ ತಂಡವೊಂದು ಭಾರತಕ್ಕೆ ಬೇಟಿ ನೀಡಿತ್ತು ಹಾಗೂ ಮುಂದಿನ ವಾರ ಮತ್ತೊಂದು ಹಿರಿಯ ನಿಯೋಗವು ಭಾರತಕ್ಕೆ ಆಗಮಿಸಲಿದ್ದು, ಸಾವಿರಾರು ಕಾರ್ಮಿಕರ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಕಟ್ಟಡ ನಿರ್ಮಾಣಕಾರರ ಸಂಘದ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ಡಿಸೆಂಬರ್ 27ರಂದು ದಿಲ್ಲಿ ಹಾಗೂ ಚೆನ್ನೈನಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ. ಸರಕಾರದ ಅನುಮೋದನೆಯ ಪ್ರಕಾರ ಸದ್ಯಕ್ಕೆ ನಾವು 10 ಸಾವಿರ ಮಂದಿಯನ್ನು ಕೊಂಡೊಯ್ಯುವ ನಿರೀಕ್ಷೆಯಲ್ಲಿದ್ದೇವೆ. ಅದರ ಪ್ರಗತಿಯನ್ನು ಅವಲಂಭಿಸಿ ನಿಕಟಭವಿಷ್ಯದಲ್ಲಿ 30 ಸಾವಿರಕ್ಕೂ ಅಧಿಕ ಮಂದಿಯನ್ನು ನೇಮಿಸುವ ಬಗ್ಗೆ ಯೋಚಿಸುತ್ತಿದ್ದೇವೆ’’ ಎಂದು ಇಸ್ರೇಲ್ ನ ಕಟ್ಟಡ ನಿರ್ಮಾಣಕಾರರ ಸಂಘದ ವಕ್ತಾರ ಹಾಗೂ ಉಪ ಮಹಾನಿರ್ದೇಶಕ ಶಾಯ್ ಪೌಝ್ನರ್ ತಿಳಿಸಿದರು.
ಮುಂದಿನ 10-15 ದಿನಗಳೊಳಗೆ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದವರು ಹೇಳಿದ್ದಾರೆ.
ಇಸ್ರೇಲ್ ಬಿಲ್ಡರ್ಗಳ ಸಂಘದ, ಕಾರ್ಮಿಕರ ವಿಷಯಗಳನ್ನು ನಿರ್ವಹಿಸುವ ವಿಭಾಗದ ವರಿಷ್ಠ ಇಝಾಕ್ ಗುರ್ವಿಟ್ಝ್ ನೇತೃತ್ವದ ನಿಯೋಗವು ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು ಹಾಗೂ ಮುಂದಿನ ವಾರ ಭಾರತಕ್ಕೆ ಆಗಮಿಸಲಿರುವ ಐಬಿಎನ ಸಿಇಓ ತಸ್ಲೊವಿಕ್ ಅವರೊಂದಿಗೆ ಮತ್ತೆ ಭಾರತಕ್ಕೆ ಆಗಮಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ನಡೆಸಿದ ದೂರವಾಣಿ ಸಂಭಾಷಣೆಲ್ಲಿ ಇಸ್ರೇಲ್ ಗೆ ಭಾರತದಿಂದ ವಿದೇಶಿ ಕಾರ್ಮಿಕರ ಆಗಮನವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದರೆಂದು ಇಸ್ರೇಲ್ ನಲ್ಲಿರುವ ಪ್ರಧಾನಿ ಕಾರ್ಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ನಮಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಅಗತ್ಯವಿದೆ. ಈ ಕಾರ್ಮಿಕರನ್ನು ಎಲ್ಲಿಂದ ಕರೆತರೇಕೆಂಬುದನ್ನು ನಮ್ಮ ಸರಕಾರವು ನಿರ್ಧರಿಸುತ್ತಿದೆ’’ ಎಂದು ಇಸ್ರೇಲ್ ಕಟ್ಟಡ ನಿರ್ಮಾಣಕಾರರ ಸಂಘದ ವಕ್ತಾರ ಪೌಝ್ನರ್ ತಿಳಿಸಿದ್ದಾರೆ.