ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಬಲಿ : ವರದಿ
ಬೈರುತ್ : ದಕ್ಷಿಣ ಲೆಬನಾನ್‍ನ ಬೈರುತ್‍ನಲ್ಲಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕಳೆದ 32 ವರ್ಷದಿಂದ ಹಿಜ್ಬುಲ್ಲಾದ ನೇತೃತ್ವ ವಹಿಸಿದ್ದ ಹಸನ್ ನಸ್ರುಲ್ಲಾ ಹತರಾಗಿರುವುದಾಗಿ ಇಸ್ರೇಲ್ ಮಿಲಿಟರಿ ಶನಿವಾರ ಹೇಳಿದೆ.
ಶುಕ್ರವಾರ ರಾತ್ರಿ ನಡೆದ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು ಇತರ 108 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‍ನ ಅಧಿಕಾರಿಗಳು ಹೇಳಿದ್ದಾರೆ. ಬಾಂಬ್ ದಾಳಿಯಲ್ಲಿ ಹಲವು ಗಗನಚುಂಬಿ ಕಟ್ಟಡಗಳು ಧ್ವಂಸಗೊಂಡಿವೆ. ಹಸನ್ ನಸ್ರುಲ್ಲಾರ ಪುತ್ರಿ ಝೈನಾಬ್ ನಸ್ರುಲ್ಲಾ ಕೂಡಾ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿ ದೃಢಪಟ್ಟಿಲ್ಲ. ಈ ದಾಳಿಗೆ ಇಸ್ರೇಲ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹಿಜ್ಬುಲ್ಲಾ, ಹಮಾಸ್ ಮತ್ತು ಇರಾನ್ ಪ್ರತಿಜ್ಞೆ ಮಾಡಿವೆ.
ದಾಹಿಹ್ ಪ್ರದೇಶದ ವಸತಿ ಕಟ್ಟಡದ ಕೆಳಗೆ ಭೂಗತವಾಗಿ ಕಾರ್ಯನಿರ್ವಹಿಸುತ್ತಿದ್ದ ಹಿಜ್ಬುಲ್ಲಾ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಇಸ್ರೇಲ್ ವಾಯುಪಡೆ ದಾಳಿ ನಡೆಸಿದೆ. ದಾಳಿಯಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ, ಹಿಜ್ಬುಲ್ಲಾದ ದಕ್ಷಿಣ ಮುಂಚೂಣಿ ತುಕಡಿಯ ಕಮಾಂಡರ್ ಆಲಿ ಕರಾಕಿ ಹಾಗೂ ಇತರ ಹಲವು ಕಮಾಂಡರ್ ಗಳು ಮೃತಪಟ್ಟಿದ್ದಾರೆ. ನ್ಯೂಯಾರ್ಕ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುವುದಕ್ಕೂ ಕೆಲ ಕ್ಷಣಗಳ ಮುನ್ನ ಈ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದಿಸಿರುವುದಾಗಿ ವರದಿಯಾಗಿದೆ.
`ಭೂಗತ ಪ್ರಧಾನ ಕಚೇರಿಯಲ್ಲಿ ಹಿಜ್ಬುಲ್ಲಾದ ಉನ್ನತ ಕಮಾಂಡರ್ ಗಳು ಸಭೆ ಸೇರಿ ಇಸ್ರೇಲ್‍ನ ವಿರುದ್ಧ ದಾಳಿಗೆ ಯೋಜನೆ ರೂಪಿಸುತ್ತಿರುವ ಬಗ್ಗೆ ನಿಖರ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಹಸನ್ ನಸ್ರುಲ್ಲಾ ತನ್ನ 32 ವರ್ಷದ ಅಧಿಕಾರಾವಧಿಯಲ್ಲಿ ಹಲವು ಇಸ್ರೇಲ್ ಪ್ರಜೆಗಳು ಮತ್ತು ಯೋಧರ ಹತ್ಯೆಗೆ ಮತ್ತು ಸಾವಿರಾರು ಭಯೋತ್ಪಾದಕ ದಾಳಿಗೆ ಹೊಣೆಯಾಗಿದ್ದಾರೆ' ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.
ಶುಕ್ರವಾರ ರಾತ್ರಿ ಲೆಬನಾನ್ ರಾಜಧಾನಿ ಮೇಲೆ ನಡೆದ ಭಾರೀ ವೈಮಾನಿಕ ದಾಳಿಯ ಬಳಿಕ ಸ್ಫೋಟ ಸಂಭವಿಸಿ ಹಲವು ಕಟ್ಟಡಗಳಿಗೆ ಬೆಂಕಿ ಆವರಿಸಿದೆ. ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸಿರುವ ವೀಡಿಯೊ ವೈರಲ್ ಆಗಿದೆ. ಸರಣಿ ಸ್ಫೋಟ ಸಂಭವಿಸಿದ್ದು ಕನಿಷ್ಟ 11 ಮಂದಿ ಸಾವನ್ನಪ್ಪಿದ್ದಾರೆ. ಇತರ 108 ಮಂದಿ ಗಾಯಗೊಂಡಿದ್ದಾರೆ. 6 ಕಟ್ಟಡಗಳು ಧ್ವಂಸಗೊಂಡಿದ್ದು ಕಟ್ಟಡಗಳ ಅವಶೇಷಗಳಡಿ ಇನ್ನೂ ಕೆಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ. ಕಳೆದ ಒಂದು ವಾರದಲ್ಲೇ ಇಸ್ರೇಲ್ ದಾಳಿಗೆ 700ಕ್ಕೂ ಅಧಿಕ ಮಂದಿ ಬಲಿಯಾಗಿರುವುದಾಗಿ ಲೆಬನಾನ್ ಅಧಿಕಾರಿಗಳು ಹೇಳಿದ್ದಾರೆ.
►ನಸ್ರುಲ್ಲಾ ಮೃತಪಟ್ಟಿರುವುದನ್ನು ದೃಢಪಡಿಸಿದ ಹಿಜ್ಬುಲ್ಲಾ
ತನ್ನ ಮುಖಂಡ ಹಾಗೂ ಸ್ಥಾಪಕರಲ್ಲಿ ಒಬ್ಬರಾದ ಹಸನ್ ನಸ್ರುಲ್ಲಾ ಶುಕ್ರವಾರ ರಾತ್ರಿ ಬೈರೂತ್‍ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಶನಿವಾರ ದೃಢಪಡಿಸಿದೆ.
32 ವರ್ಷ ಹೋರಾಟವನ್ನು ಮುನ್ನಡೆಸಿದ ನಸ್ರುಲ್ಲಾ ಶತ್ರುಗಳ ದಾಳಿಗೆ ಬಲಿಯಾಗಿದ್ದಾರೆ. ಆದರೆ ಶತ್ರುಗಳ ವಿರುದ್ಧದ ಮತ್ತು ಫೆಲೆಸ್ತೀನೀಯರನ್ನು ಬೆಂಬಲಿಸಿ ನಡೆಯುತ್ತಿರುವ ಪವಿತ್ರ ಯುದ್ಧ ಮುಂದುವರಿಯಲಿದೆ ಎಂದು ಹಿಜ್ಬುಲ್ಲಾದ ಹೇಳಿಕೆ ತಿಳಿಸಿದೆ. ನಸ್ರುಲ್ಲಾ ಲೆಬನಾನ್‍ನಲ್ಲಿ, ವಿಶೇಷವಾಗಿ ತಮ್ಮ ಶಿಯಾ ಬೆಂಬಲಿಗರಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದರು. ಯುದ್ಧವನ್ನು ನಡೆಸುವುದು ಮತ್ತು ಶಾಂತಿ ಮಾತುಕತೆಯ ಮಧ್ಯಸ್ಥಿಕೆ ವಹಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.