ರಫಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆ ಹಮಾಸ್ ಅನ್ನು ತೊಡೆದುಹಾಕದು: ಬ್ಲಿಂಕೆನ್
ವಾಷಿಂಗ್ಟನ್: ಗಾಝಾ ಪಟ್ಟಿಯ ಮೇಲೆ ಇಸ್ರೇಲ್‍ನ ಭಾರೀ ಪ್ರಮಾಣದ ದಾಳಿ ಅರಾಜಕತೆಗೆ ಕಾರಣವಾಗಲಿದೆ. ಆದರೆ ಹಮಾಸ್ ಅನ್ನು ತೊಡೆದುಹಾಕದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಯುದ್ಧ ಪ್ರಾರಂಭವಾದಂದಿನಿಂದ ಇಸ್ರೇಲಿ ಪಡೆಗಳ ದಾಳಿಯಲ್ಲಿ ಹಮಾಸ್ ಸದಸ್ಯರಿಗಿಂತ ಹೆಚ್ಚು ನಾಗರಿಕರು ಹತರಾಗಿದ್ದಾರೆ ಎಂಬ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆಯನ್ನು ಅಮೆರಿಕ ಒಪ್ಪುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ಲಿಂಕೆನ್ `ಹೌದು. ರಫಾದ ಮೇಲೆ ಯೋಜಿತ ಭೂದಾಳಿಯೂ ಇದೇ ಪರಿಣಾಮಕ್ಕೆ ಕಾರಣವಾಗಬಹುದು. ರಫಾದ ಮೇಲಿನ ಭಾರೀ ಆಕ್ರಮಣವು ಹಮಾಸ್‍ನ ಬೆದರಿಕೆಯನ್ನು ಕೊನೆಗೊಳಿಸುವ ಸಾಧ್ಯತೆಯಿಲ್ಲ ಎಂದರು.
ಈ ಮಧ್ಯೆ, ಇಸ್ರೇಲ್‍ನ ರಾಷ್ಟ್ರೀಯ ಭದ್ರತಾ ಸಲಹೆಗಾರ ತಝಾಚಿ ಹನೆಬಿ ಜತೆ ದೂರವಾಣಿಯಲ್ಲಿ ಮಾತನಾಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ , ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನತೆ ಆಶ್ರಯ ಪಡೆದಿರುವ ರಫಾದಲ್ಲಿ ಬೃಹತ್ ಪ್ರಮಾಣದ ಭೂದಾಳಿಯ ಬಗ್ಗೆ ಅಮೆರಿಕದ ಕಳವಳವನ್ನು ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.