ಗಾಝಾ: ಇಸ್ರೇಲ್ ಬಾಂಬ್ ದಾಳಿಗೆ 76 ಫೆಲೆಸ್ತೀನಿಯರ ಸಾವು
ಜೆರುಸಲೇಂ: ಕಳೆದ 24 ತಾಸುಗಳ ಅವಧಿಯಲ್ಲಿ ಗಾಝಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳಲ್ಲಿ 76 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ರಫಾದ ಮೂರು ಮನೆಗಳು ಬಾಂಬ್ ದಾಳಿಯಿಂದ ನೆಲಸಮಗೊಂಡಿವೆ. ಉತ್ತರ ಇಸ್ರೇಲ್- ಲೆಬನಾನ್ ಗಡಿ ಪ್ರದೇಶದಲ್ಲಿಯೂ ಸಂಘರ್ಷ ತೀವ್ರಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಬುಧವಾರ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಹಿಝ್ಬೊಲ್ಲಾ ಹೋರಾಟಗಾರರು ಇಸ್ರೇಲ್ನ ಗಡಿಪ್ರದೇಶದ ನಗರವಾದ ಕಿರಯತ್ ಶಮೋನಾದ ಮೇಲೆ ತೀವ್ರ ರಾಕೆಟ್ ದಾಳಿಗಳನ್ನು ನಡೆಸಿವೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಿಝ್ಬುಲ್ಲಾ ಹೋರಾಟಗಾರರ ಪ್ರತಿ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ಇಸ್ರೇಲ್ ಗಾಝಾದ ಮೇಲೆ ಆಕ್ರಮಣ ನಡೆಸಿದ ಬಳಿಕ ಭುಗಿಲೆದ್ದ ಸಂಘರ್ಷದಲ್ಲಿ ಈವರೆಗೆ 32,499 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 74,889 ಮಂದಿ ಗಾಯಗೊಂಡಿದ್ದಾರೆ.
ನೆತನ್ಯಾಹು ಅಮೆರಿಕ ಪ್ರವಾಸ ರದ್ದು
ಈ ಮಧ್ಯೆ ಗಾಝಾದಲ್ಲಿ ಕದನವಿರಾಮವನ್ನು ಘೋಷಿಸಬೇಕೆಂದು ಆಗ್ರಹಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಣಯವನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಅಮೆರಿಕ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಭದ್ರತಾ ಮಂಡಳಿಯ ನಿರ್ಣಯದಲ್ಲಿ ಅಮೆರಿಕವು ಗೈರುಹಾಜರಾಗಿತ್ತು. ಭದ್ರತಾ ಮಂಡಳಿಯ ನಿರ್ಣಯದ ವಿರುದ್ಧ ಅಮೆರಿಕವು ವೀಟೊ ಪ್ರಯೋಗಿಸದೆ ತಪ್ಪು ಮಾಡಿದೆಯೆಂದು ಇಸ್ರೇಲ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.