ಮಾನವ ಹಕ್ಕುಗಳು, ಪತ್ರಿಕಾ ಸ್ವಾತಂತ್ರ್ಯ ಮಹತ್ವವನ್ನು ಪ್ರಧಾನಿ ಮೋದಿ ಜೊತೆ ಪ್ರಸ್ತಾಪಿಸಿದ್ದೇನೆ: ಅಮೆರಿಕ ಅಧ್ಯಕ್ಷ ಬೈಡನ್

Update: 2023-09-11 11:17 GMT

Photo credit: X/@PMOIndia

ಹ್ಯಾನೊಯ್(ವಿಯೆಟ್ನಾಂ): ಭಾರತ-ಅಮೆರಿಕ ಸಹಭಾಗಿತ್ವವನ್ನು ಬಲಪಡಿಸಲು ಮಾರ್ಗಗಳ ಕುರಿತು ತಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗಣನೀಯ ಚರ್ಚೆಗಳನ್ನು ನಡೆಸಿದ್ದೇನೆ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು, ಮೋದಿಯವರ ನಾಯಕತ್ವಕ್ಕಾಗಿ ಮತ್ತು ದಿಲ್ಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ರವಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಹಕ್ಕುಗಳನ್ನು ಗೌರವಿಸುವ ಮಹತ್ವವನ್ನು ತಾನು ಮೋದಿಯವರೊಂದಿಗೆ ಪ್ರಸ್ತಾವಿಸಿದ್ದೇನೆ ಎಂದು ಹೇಳಿದರು.

‘ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಅವರ ಆತಿಥ್ಯಕ್ಕಾಗಿ ಹಾಗೂ ಜಿ20 ಶೃಂಗಸಭೆಯನ್ನು ಅಯೋಜಿಸಿದ್ದಕ್ಕಾಗಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಕಳೆದ ಜೂನ್‌ನಲ್ಲಿ ಮೋದಿಯವರು ಶ್ವೇತಭವನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ನಾವಿಬ್ಬರೂ ಗಣನೀಯ ಚರ್ಚೆಗಳನ್ನು ನಡೆಸಿದ್ದೆವು’ ಎಂದು ಬೈಡೆನ್ ಹೇಳಿದರು.

‘ನಾನು ಯಾವಾಗಲೂ ಮಾಡುವಂತೆ, ಮಾನವ ಹಕ್ಕುಗಳನ್ನು ಗೌರವಿಸುವ ಮಹತ್ವ ಮತ್ತು ಸದೃಢ ಹಾಗು ಸಮೃದ್ಧ ದೇಶವನ್ನು ನಿರ್ಮಿಸುವಲ್ಲಿ ನಾಗರಿಕ ಸಮಾಜ ಮತ್ತು ಮುಕ್ತ ಮಾಧ್ಯಮಗಳ ಪ್ರಮುಖ ಪಾತ್ರವನ್ನು ನಾನು ಮೋದಿಯವರೊಂದಿಗೆ ಎತ್ತಿದ್ದೇನ ’ ಎಂದರು. ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತದಲ್ಲಿ ತನ್ನ ಪ್ರಮುಖ ಕಲಾಪಗಳ ಬಗ್ಗೆಯೂ ಅವರು ಮಾತನಾಡಿದರು.

‘ವಿಶ್ವಾದ್ಯಂತ ಜನರನ್ನು ಹೆಚ್ಚು ಕಾಡುತ್ತಿರುವ ಸವಾಲುಗಳನ್ನು ಬಗೆಹರಿಸುವಲ್ಲಿ ನಮ್ಮ ಜಾಗತಿಕ ನಾಯಕತ್ವ ಮತ್ತು ನಮ್ಮ ಬದ್ಧತೆಯನ್ನು ಪ್ರದರ್ಶಿಸಲು ಇದು ಅಮೆರಿಕಕ್ಕೆ ಮಹತ್ವದ ಘಳಿಗೆಯಾಗಿತ್ತು. ನಾವು ಹಂಚಿಕೊಂಡಿರುವ ಭವಿಷ್ಯಕ್ಕಾಗಿ ಅಮೆರಿಕವು ಸಕರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಪಾಲುದಾರನಾಗಿದೆ ಎನ್ನುವುದನ್ನು ನಾವು ವಿಶ್ವಕ್ಕೆ ತೋರಿಸಿದ್ದೇವೆ’ ಎಂದೂ ಬೈಡನ್ ಹೇಳಿದರು.

ಭಾರತವನ್ನು ಮಧ್ಯಪ್ರಾಚ್ಯ ಮತ್ತು ಇಸ್ರೇಲ್‌ನೊಂದಿಗೆ ಯುರೋಪ್‌ಗೆ ಸಂಪರ್ಕಿಸುವ ಕಾರಿಡಾರ್ ಕುರಿತಂತೆ ಅವರು, ಅದು ಪರಿವರ್ತನಕಾರಿ ಆರ್ಥಿಕ ಹೂಡಿಕೆಗಾಗಿ ಅಪರಿಮಿತ ಅವಕಾಶಗಳನ್ನು ತೆರೆಯಲಿದೆ ಎಂದರು.

ಉಕ್ರೇನ್‌ನಲ್ಲಿಯ ‘ಕಾನೂನುಬಾಹಿರ ಯುದ್ಧ’ದ ಕುರಿತೂ ಶೃಂಗಸಭೆಯಲ್ಲಿ ಚರ್ಚಿಸಲಾಗಿದೆ ಮತ್ತು ನ್ಯಾಯ ಹಾಗೂ ಶಾಶ್ವತ ಶಾಂತಿಯ ಅಗತ್ಯಕ್ಕಾಗಿ ಸಾಕಷ್ಟು ಸಹಮತ ಮೂಡಿದೆ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಬೈಡನ್, ವಿಯೆಟ್ನಾಂ ಮತ್ತು ಇತರ ಆಸಿಯಾನ್ ದೇಶಗಳೊಂದಿಗೆ ಅಮೆರಿಕ ಸಂಬಂಧಗಳನ್ನು ನಿರ್ಮಿಸುವ ಮೂಲಕ ವಿಶ್ವಾದ್ಯಂತ ಸ್ಥಿರತೆಯನ್ನು ಒದಗಿಸುವುದು ತನ್ನ ಗುರಿಯಾಗಿದೆ ಎಂದರು.

ಚೀನಾದೊಂದಿಗೆ ಶೀತಲ ಸಮರವನ್ನು ಆರಂಭಿಸಲು ತಾನು ಪ್ರಯತ್ನಿಸುತ್ತಿಲ್ಲ ಎಂದು ಒತ್ತಿ ಹೇಳಿದ ಅವರು, ಇದು ಚೀನಾವನ್ನು ನಿಯಂತ್ರಿಸುವ ಕುರಿತು ಅಲ್ಲ,ಇದು ಸ್ಥಿರವಾದ ನೆಲೆಯನ್ನು ಹೊಂದುವ ಕುರಿತಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News