ಗಾಝಾದಲ್ಲಿನ ಹತ್ಯೆಗಳು ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಮ : ವಿಶ್ವಸಂಸ್ಥೆ ತನಿಖಾ ಆಯೋಗದ ವರದಿ

Update: 2024-06-12 15:55 GMT

ಸಾಂದರ್ಭಿಕ ಚಿತ್ರ |  PC : PTI 

ಜಿನೆವಾ : ಗಾಝಾ ಯುದ್ಧದ ಆರಂಭಿಕ ಹಂತದಲ್ಲಿ ಇಸ್ರೇಲ್ ಮತ್ತು ಹಮಾಸ್ ಎರಡೂ ಯುದ್ಧಾಪರಾಧ ಎಸಗಿವೆ. ಅಪಾರ ಪ್ರಮಾಣದ ನಾಗರಿಕರ ಜೀವಹಾನಿಯಿಂದಾಗಿ ಇಸ್ರೇಲ್ನ ಕ್ರಮಗಳನ್ನು ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಮವಾಗಿದೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ಬುಧವಾರ ಉಲ್ಲೇಖಿಸಿದೆ.

ಎರಡು ಸಮಾನಾಂತರ ತನಿಖಾ ವರದಿಯನ್ನು ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಅಕ್ಟೋಬರ್ 7ರ ಹಮಾಸ್ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಇಸ್ರೇಲ್ನ ಪ್ರತೀಕಾರ ದಾಳಿಯ ಕುರಿತ ಮಾಹಿತಿಯನ್ನು ಆಧರಿಸಿ `ವಿಶ್ವಸಂಸ್ಥೆಯ ತನಿಖಾ ಆಯೋಗ(ಸಿಒಐ)' ಈ ವರದಿಯನ್ನು ಪ್ರಕಟಿಸಿದೆ.

ಪುರಾವೆಗಳನ್ನು ಸಂಗ್ರಹಿಸಲು ಮತ್ತು ಇಸ್ರೇಲ್ ಹಾಗೂ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಅಪರಾಧದ ತಪ್ಪಿತಸ್ಥರನ್ನು ಗುರುತಿಸಲು ಅಸಾಮಾನ್ಯವಾದ ವ್ಯಾಪಕ ಆದೇಶವನ್ನು ಸಿಐಒ ಹೊಂದಿದೆ. ವಿಶ್ವಸಂಸ್ಥೆಯ ತನಿಖಾ ಆಯೋಗ ಇಸ್ರೇಲ್ ವಿರುದ್ಧದ ಪಕ್ಷಪಾತದ ನಿಲುವನ್ನು ಹೊಂದಿರುವುದರಿಂದ ಆಯೋಗಕ್ಕೆ ಸಹಕಾರ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ತನ್ನ ಕಾರ್ಯಕ್ಕೆ ಇಸ್ರೇಲ್ ಅಡ್ಡಿಪಡಿಸಿದೆ ಮತ್ತು ಇಸ್ರೇಲ್ ಹಾಗೂ ಆಕ್ರಮಿತ ಫೆಲಸ್ತೀನ್ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸದಂತೆ ತನಿಖಾಧಿಕಾರಿಗಳನ್ನು ತಡೆದಿದೆ ಎಂದು ಸಿಒಐ ಹೇಳಿಕೆ ನೀಡಿದೆ.

ವರದಿಯನ್ನು ತಿರಸ್ಕರಿಸುವುದಾಗಿ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ರಾಜತಾಂತ್ರಿಕ ನಿಯೋಗ ಹೇಳಿದ್ದು `ತನ್ನ ಕೃತ್ಯಗಳು ಇಸ್ರೇಲ್ ವಿರುದ್ಧದ ರಾಜಕೀಯ ಅಜೆಂಡಾದ ಪರವಾಗಿದೆ ಎಂಬುದನ್ನು ಸಿಒಐ ಮತ್ತೊಮ್ಮೆ ಸಾಬೀತುಪಡಿಸಿದೆ' ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಮೀರಾವ್ ಐಲಾನ್ ಶಹಾರ್ ಹೇಳಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ನೊಳಗೆ ನಡೆಸಿದ ದಾಳಿಯಲ್ಲಿ 1,200ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದು 250 ಜನರನ್ನು ಹಮಾಸ್ ಅಪಹರಿಸಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್ನ ಪ್ರತಿದಾಳಿಯಲ್ಲಿ 37,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಹೇಳಿದೆ.

ಡಿಸೆಂಬರ್ ಅಂತ್ಯದವರೆಗಿನ ಯುದ್ಧದ ಅಂಕಿಅಂಶ, ಮಾಹಿತಿ, ದಾಖಲೆಯನ್ನು ಒಳಗೊಂಡಿರುವ ವರದಿಯಲ್ಲಿ `ಎರಡೂ ಕಡೆಯವರು ಚಿತ್ರಹಿಂಸೆ, ಹತ್ಯೆ ಅಥವಾ ಉದ್ದೇಶಪೂರ್ವಕ ಹತ್ಯೆ, ವೈಯಕ್ತಿಕ ಘನತೆಗೆ ಹಾನಿ, ಅಮಾನವೀಯವಾಗಿ ಅಥವಾ ಕ್ರೂರವಾಗಿ ನಡೆಸಿಕೊಳ್ಳುವ ಮೂಲಕ ಯುದ್ಧಾಪರಾಧ ಎಸಗಿದ್ದಾರೆ' ಎಂದು ಉಲ್ಲೇಖಿಸಿದೆ. ಉಪವಾಸ ಕೆಡಹುವುದನ್ನು ಯುದ್ಧದ ವಿಧಾನವಾಗಿ ಇಸ್ರೇಲ್ ಬಳಸಿದೆ. ಆಹಾರ, ನೀರು, ಆಶ್ರಯ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಗಾಝಾ ಪ್ರದೇಶಕ್ಕೆ ಒದಗಿಸಲು ವಿಫಲವಾಗಿದೆ. ಜತೆಗೆ, ಇತರರು ಒದಗಿಸುವುದನ್ನೂ ತಡೆದಿದೆ. ಕೊಲೆಯಂತಹ ಕೆಲವು ಯುದ್ಧಾಪರಾಧಗಳು ಇಸ್ರೇಲ್ನಿಂದ ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆ ನಿಯೋಜಿಸಿರುವ ತನಿಖಾ ಸಂಸ್ಥೆಗಳು ಸಂಗ್ರಹಿಸುವ ಪುರಾವೆಗಳು ಯುದ್ಧಾಪರಾಧದ ವಿಚಾರಣೆಗೆ ಆಧಾರವಾಗಬಹುದು ಮತ್ತು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇದನ್ನು ಬಳಸಬಹುದು. ಜಿನೆವಾದಲ್ಲಿ ಮುಂದಿನ ವಾರ ನಡೆಯಲಿರುವ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಈ ವರದಿಯ ಬಗ್ಗೆ ಚರ್ಚೆ ನಡೆಯಲಿದೆ.

*ಎರಡು ವರದಿ

ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳು, ನೂರಾರು ಹೇಳಿಕೆಗಳು, ಉಪಗ್ರಹದ ಫೋಟೋಗಳು, ವೈದ್ಯಕೀಯ ವರದಿಗಳು ಮತ್ತು ಪರಿಶೀಲಿಸಿದ ಮುಕ್ತ ಮೂಲಗಳನ್ನು ಆಧರಿಸಿ ಸಿಒಐ ಎರಡು ವರದಿ ಸಲ್ಲಿಸಿದೆ. ಹಮಾಸ್ನ ಅಕ್ಟೋಬರ್ 7ರ ದಾಳಿಗೆ ಸಂಬಂಧಿಸಿದ 59 ಪುಟಗಳ ವರದಿಯಲ್ಲಿ `ಸಾರ್ವಜನಿಕ ಪ್ರದೇಶದಲ್ಲಿ ಸಾಮೂಹಿಕ ಹತ್ಯೆಯ ನಾಲ್ಕು ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಹಮಾಸ್ನಿಂದ ಲೈಂಗಿಕ ಹಿಂಸೆಯ ಮಾದರಿಯನ್ನು ಗುರುತಿಸಲಾಗಿದೆ. ಆದರೆ ಅತ್ಯಾಚಾರದ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ' ಎಂದು ಉಲ್ಲೇಖಿಸಿದೆ.

ಗಾಝಾದ ಮೇಲಿನ ಇಸ್ರೇಲ್ ಪ್ರತೀಕಾರದ ದಾಳಿಗೆ ಸಂಬಂಧಿಸಿದ 126 ಪುಟಗಳ ವರದಿಯಲ್ಲಿ `ಇಸ್ರೇಲ್ ನಗರ ಪ್ರದೇಶಗಳಲ್ಲಿ ವ್ಯಾಪಕ ವಿನಾಶಕಾರಿ ಸಾಮರ್ಥ್ಯವನ್ನು ಹೊಂದಿರುವ ಎಂಕೆ84 ಮಾರ್ಗದರ್ಶಿ ಬಾಂಬ್ನಂತಹ ಅಸ್ತ್ರಗಳನ್ನು ಬಳಸಿದ್ದು ಇದು ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಹೊಂದಿಕೆಯಾಗುವುದಿಲ್ಲ. ಈ ಅಸ್ತ್ರಗಳು ಉದ್ದೇಶಿತ ಮಿಲಿಟರಿ ಗುರಿಗಳು ಮತ್ತು ನಾಗರಿಕ ವಸ್ತುಗಳ ನಡುವೆ ಸಮರ್ಪಕವಾಗಿ ಅಥವಾ ನಿಖರವಾಗಿ ತಾರತಮ್ಯ ಮಾಡುವುದಿಲ್ಲ' ಎಂದು ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News