ಗಾಝಾದಲ್ಲಿ ವೈದ್ಯಕೀಯ ಸೇವೆ, ಔಷಧಿಗಳ ಕೊರತೆ

Update: 2024-01-18 17:20 GMT

ಸಾಂದರ್ಭಿಕ ಚಿತ್ರ | Photo: NDTV 

ಗಾಝಾಸಿಟಿ: ಇಸ್ರೇಲ್ ದಾಳಿಯ ಬಳಿಕ ಗಾಝಾಪಟ್ಟಿಯಲ್ಲಿ ಸೀಮಿತವಾದ ವೈದ್ಯಕೀಯ ಔಷಧಿ, ಸಾಮಾಗ್ರಿಗಳ ಪೂರೈಕೆ, ಆರೋಗ್ಯ ಕೇಂದ್ರಗಳ ಲಭ್ಯತೆಯ ಕೊರತೆಯಿಂದಾಗಿ ಗರ್ಭಿಣಿಯರು ಗರ್ಭಸ್ರಾವಕ್ಕೊಳಗಾಗುವ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆಯೆಂದು ಮಾನವೀಯ ನೆರವಿನ ಸಂಸ್ಥೆ ಕೇರ್ ಬುಧವಾರ ಪ್ರಕಟಿಸಿದ ವರದಿಯೊಂದುತಿಳಿಸಿದೆ.

ಇಸ್ರೇಲ್-ಹಮಾಸ್ ಸಂಘರ್ಷವು 100 ದಿನಗಳನ್ನು ದಾಟಿದ್ದು, ಈ ಅವಧಿಯಲ್ಲಿ ಸುಮಾರು 17 ಸಾವಿರ ಮಹಿಳೆಯರು ಅತ್ಯಂತ ಭೀಭತ್ಸವಾದ ಸನ್ನಿವೇಶಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆರೋಗ್ಯಪಾಲನಾ ವ್ಯವಸ್ಥೆಯ ಪತನ, ಅಪೌಷ್ಟಿಕತೆ, ಹಾಗೂ ಶುದ್ಧ ನೀರಿನ ಕೊರತೆಯು ಮಹಿಳೆಯರು ಹಾಗೂ ಅವರ ಶಿಶುಗಳ ಪ್ರಾಣಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.

ಯುದ್ಧಪೀಡಿತ ಗಾಝಾದಲ್ಲಿ ಗರ್ಭಿಣಿಯರಿಗೆ ಸಮರ್ಪಕವಾದ ಆಹಾರ ಹಾಗೂ ಪೋಷಕಾಂಶಗಳ ಕೊರತೆಯಿಂದಾಗಿ ಅವರ ಭ್ರೂಣದ ಆರೋಗ್ಯದ ಮೇಲೆ ಪರಿಣಾಮವಾಗಿದ್ದು, ಇದರ ಪರಿಣಾಮವಾಗಿ ಗರ್ಭಸ್ರಾವದ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ ಎಂದು ಕೇರ್ ನ ಪ್ರಾದೇಶಿಕ ಸಲಹೆಗಾರ್ತಿ ನೂರ್ ಬೆದೊಯಿನ್ ತಿಳಿಸಿದ್ದಾರೆ.

ಗಾಝಾದಲ್ಲಿ ಪ್ರಸಕ್ತ ಎಲ್ಲಾ ಗರ್ಭಿಣಿಯರು ಅತ್ಯಂತ ಅಸುರಕ್ಷಿತ ಪರಿಸ್ಥಿತಿಯಲ್ಲಿ ಪ್ರಸವಿಸುವ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರು ಕಾರುಗಳು, ಡೇರೆಗಳು ಹಾಗೂ ಆಶ್ರಯತಾಣಗಳಲ್ಲಿ ಮಕ್ಕಳನ್ನು ಪ್ರಸವಿಸುತ್ತಿದ್ದಾರೆ ಎಂದು ಫೆಲೆಸ್ತೀನಿನ ಕುಟುಂಬ ಯೋಜನೆ ಹಾಗೂ ರಕ್ಷಣಾ ಸಂಘದ ಕಾರ್ಯಕಾರಿ ನಿರ್ದೇಶಕ ಅಮ್ಮಾಲ್ ಅವಾದಲ್ಲಾ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News