ಲೆಬನಾನ್: ಹಿಜ್ಬುಲ್ಲಾ ತರಬೇತಿ ಶಿಬಿರದ ಮೇಲೆ ಇಸ್ರೇಲ್ ದಾಳಿ
Update: 2024-04-07 17:24 GMT
ಬೈರುತ್: ಪೂರ್ವ ಲೆಬನಾನ್‍ನ ಬೆಕಾ ಕಣಿವೆಯಲ್ಲಿ ರವಿವಾರ ಬೆಳಿಗ್ಗೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಲೆಬನಾನ್ ಭದ್ರತಾ ಪಡೆಯ ಮೂಲಗಳು ಹೇಳಿವೆ.
ಲೆಬನಾನ್ ಮೇಲೆ ಹಾರುತ್ತಿದ್ದ ಇಸ್ರೇಲ್‍ನ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಸಿರಿಯಾದ ಗಡಿಯ ಸಮೀಪದಲ್ಲಿರುವ ಜಂತಾ ಗ್ರಾಮದಲ್ಲಿ ಹಿಜ್ಬುಲ್ಲಾ ತರಬೇತಿ ಶಿಬಿರವನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಬಾಲ್ಬೆಕ್ ನಗರದ ಬಳಿಯ ಸಾಫ್ರಿ ನಗರಕ್ಕೆ ಒಂದು ಕ್ಷಿಪಣಿ ಅಪ್ಪಳಿಸಿದೆ. ನಾಶ-ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಅಕ್ಟೋಬರ್ 8ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಗಾಝಾದಲ್ಲಿ ಇಸ್ರೇಲ್-ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಹಮಾಸ್ ಬೆಂಬಲಿಸುತ್ತಿರುವ ಹಿಜ್ಬುಲ್ಲಾ ಲೆಬನಾನ್‍ನ ದಕ್ಷಿಣದ ಗಡಿಯಾದ್ಯಂತ ಇಸ್ರೇಲ್ ಜತೆ ಸಂಘರ್ಷ ಮುಂದುವರಿಸಿದೆ.