ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ: 120ಕ್ಕೂ ಹೆಚ್ಚು ಮಂದಿ ಮೃತ್ಯು
ಹೆರಾತ್: ಅಫ್ಘಾನಿಸ್ತಾನದಲ್ಲಿ ಶನಿವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ಹೊಂದಿದ್ದ ಈ ಭೂಕಂಪದಿಂದ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.
ಈ ಪ್ರದೇಶದ ಅತಿದೊಡ್ಡ ನಗರವಾದ ಹೆರಾತ್‍ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಈ ಭೂಕಂಪದ ಕೇಂದ್ರಬಿಂದು ಇತ್ತು. ಆ ಬಳಿಕ 4.3 ರಿಂದ 6.3 ತೀವ್ರತೆಯ ಎಂಟು ಭೂಕಂಪಗಳು ಸಂಭವಿಸಿವೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿದೆ.
"ಇದುವರೆಗೆ 1000ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಗಾಯಾಳುಗಳ ಪಟ್ಟಿಯಲ್ಲಿ ಸೇರಿದ್ದಾರೆ. ಸುಮಾರು 120 ಮಂದಿ ಜೀವ ಕಳೆದುಕೊಂಡಿದ್ದಾರೆ" ಎಂದು ಹೆರಾತ್ ಪ್ರಾಂತ್ಯದ ವಿಕೋಪ ನಿರ್ವಹಣೆ ವಿಭಾಗದ ಮುಖ್ಯಸ್ಥ ಮೊಸಾ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.
ಕಂಪನದ ಅನುಭವ ಆಗುತ್ತಿದ್ದಂತೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಜನ ಕಟ್ಟಡಗಳಿಂದ ಹೊರಕ್ಕೆ ಓಡಿಬಂದರು. "ನಾವು ಕಚೇರಿಗಳಲ್ಲಿದ್ದೆವು. ದಿಢೀರನೇ ಕಂಪನ ಆರಂಭವಾಯಿತು" ಎಂದು 45 ವರ್ಷದ ಬಶೀರ್ ಅಹ್ಮದ್ ವಿವರಿಸಿದ್ದಾರೆ.
"ವಾಲ್‍ಪ್ಲೇಟರ್ ಗಳು ಬಿದ್ದವು ಹಾಗೂ ಗೋಡೆಗಳು ಬಿರುಕು ಬಿಟ್ಟವು. ಕೆಲ ಗೋಡೆ ಹಾಗೂ ಕಟ್ಟಡ ಕುಸಿಯತೊಡಗಿತು. ನಾನು ನನ್ನ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನೆಟ್‍ವರ್ಕ್ ಸಂಪರ್ಕ ಕಡಿತಗೊಂಡಿದ್ದು, ನಾನು ಭೀತಿಯಲ್ಲಿದ್ದೇನೆ. ಇದು ಭಯಾನಕ" ಎಂದು ಅವರು ಬಣ್ಣಿಸಿದರು.