ಇಸ್ರೇಲ್ ಗೆ ಸಂಬಂಧಿಸಿದ ಹಡಗುಗಳಿಗೆ ಮಲೇಶ್ಯಾ ಬಂದರಿನಲ್ಲಿ ನಿಷೇಧ
ಕೌಲಲಾಂಪುರ: ಇಸ್ರೇಲ್ ಒಡೆತನದ ಅಥವಾ ಇಸ್ರೇಲ್ ಧ್ವಜವಿರುವ ಮತ್ತು ಇಸ್ರೇಲ್ ನತ್ತ ಸಂಚರಿಸುವ ಹಡಗುಗಳು ತನ್ನ ಬಂದರಿನಲ್ಲಿ ತಂಗುವುದನ್ನು ನಿಷೇಧಿಸಿರುವುದಾಗಿ ಮಲೇಶ್ಯಾ ಸರಕಾರ ಘೋಷಿಸಿದೆ.
ಹಮಾಸ್ ಜತೆಗಿನ ಯುದ್ಧದಲ್ಲಿ ಇಸ್ರೇಲ್ ನಡೆಸಿದ ಕೃತ್ಯಗಳಿಗೆ ಪ್ರತಿಯಾಗಿ ಕೈಗೊಂಡಿರುವ ಈ ನಿರ್ಧಾರ ತಕ್ಷಣದಿಂದಲೇ ಅನ್ವಯಿಸುವಂತೆ ಜಾರಿಗೆ ಬಂದಿದೆ. ಮೂಲಭೂತ ಮಾನವೀಯ ಸಿದ್ಧಾಂತಗಳನ್ನು ಕಡೆಗಣಿಸುವ ಫೆಲೆಸ್ತೀನೀಯನ್ ಜನರ ವಿರುದ್ಧ ನಡೆಯುತ್ತಿರುವ ಹತ್ಯಾಕಾಂಡ ಮತ್ತು ನಿರಂತರ ಕ್ರೌರ್ಯದ ಮೂಲಕ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಇಸ್ರೇಲ್ ನ ಕ್ರಮಗಳಿಗೆ ಪ್ರತಿಯಾಗಿ ಈ ನಿಷೇಧ ಹೇರಲಾಗಿದೆ ಎಂದು ಮಲೇಶ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಇಸ್ರೇಲ್ ವಿರೋಧಿ ನಿಲುವು ಹೊಂದಿರುವ ಮಲೇಶ್ಯಾದ ಪ್ರಧಾನಿ ಕಳೆದ ತಿಂಗಳು ಸಂಸತ್ ನಲ್ಲಿ ಮಾಡಿದ ಭಾಷಣದಲ್ಲಿ ‘ಸರಕಾರ ಹಮಾಸ್ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳುತ್ತದೆ ಮತ್ತು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಗಾಗಿ ಹಮಾಸ್ ಅನ್ನು ದೂಷಿಸುವುದಿಲ್ಲ’ ಎಂದಿದ್ದರು.
ಮಲೇಶ್ಯಾದ ಪಾಸ್ ಪೋರ್ಟ್ ನಲ್ಲಿ ‘ಇಸ್ರೇಲ್ ಹೊರತುಪಡಿಸಿ ಇತರೆಲ್ಲಾ ದೇಶಗಳಿಗೆ ಮಾನ್ಯವಾಗಿದೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಸ್ರೇಲ್ ಪಾಸ್ ಪೋರ್ಟ್ ಹೊಂದಿರುವವರು ಪೂರ್ವಾನುಮತಿ ಪಡೆಯದೆ ಮಲೇಶ್ಯಾ ದೇಶವನ್ನು ಪ್ರವೇಶಿಸುವಂತಿಲ್ಲ. ಇಸ್ರೇಲಿ ನೋಂದಾಯಿತ ಹಡಗುಗಳು ಮತ್ತು ಕಂಪೆನಿಗಳು ಮಲೇಶ್ಯಾದ ಬಂದರಿನಲ್ಲಿ ತಂಗಲು 2005ರಿಂದ ಅವಕಾಶ ನೀಡಲಾಗಿತ್ತು. ಇದೀಗ ಹಾಲಿ ಸರಕಾರ ಈ ನಿರ್ಧಾರವನ್ನು ವಾಪಾಸು ಪಡೆಯುವುದಾಗಿ ಘೋಷಿಸಿದೆ.