ಮಾಲ್ದೀವ್ಸ್: ಸರ್ಕಾರಿ ಅಭಿಯೋಜಕರಿಗೆ ಇರಿತ ; ಸರಕಾರದ ರಾಜೀನಾಮೆಗೆ ವಿಪಕ್ಷಗಳ ಆಗ್ರಹ
ಮಾಲೆ: ಈ ಹಿಂದಿನ ಸರಕಾರ ನೇಮಿಸಿದ್ದ ಮಾಲ್ದೀವ್ಸ್‍ನ ಸರ್ಕಾರಿ ಅಭಿಯೋಜಕ(ಪ್ರಾಸಿಕ್ಯೂಟರ್ ಜನರಲ್) ಹುಸೇನ್ ಶಮೀಮ್ ಮೇಲೆ ರಾಜಧಾನಿ ಮಾಲೆಯ ರಸ್ತೆಯೊಂದರಲ್ಲಿ ದುಷ್ಕರ್ಮಿ ದಾಳಿ ನಡೆಸಿ ಮಚ್ಚಿನಿಂದ ಇರಿದಿರುವುದಾಗಿ ವರದಿಯಾಗಿದೆ.
ಬುಧವಾರ ಬೆಳಿಗ್ಗೆ ತಮ್ಮ ಕಚೇರಿಗೆ ಹೊರಟಿದ್ದ ಶಮೀಮ್‍ರನ್ನು ಅಡ್ಡಗಟ್ಟಿದ ದುಷ್ಕರ್ಮಿ ತನ್ನ ಬಳಿಯಿದ್ದ ಮಚ್ಚಿನಿಂದ ಹಲ್ಲೆ ನಡೆಸಿ ತಿವಿದಿದ್ದಾನೆ. ದುಷ್ಕರ್ಮಿಯ ದಾಳಿಯಲ್ಲಿ ಶಮೀಮ್ ಅವರ ಎಡಗೈಗೆ ಹಾನಿಯಾಗಿದ್ದು ಅವರನ್ನು ಸ್ಥಳೀಯ ಎಡಿಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಮೀಮ್ ಅವರ ಆರೋಗ್ಯ ಸ್ಥಿರವಾಗಿದೆ. ಶಮೀಮ್ ನಿರ್ವಹಿಸುತ್ತಿದ್ದ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಹಿಂದಿನ ಅಧ್ಯಕ್ಷ ಮುಹಮ್ಮದ್ ಸೊಲಿಹ್ ಅವರ ಮಾಲ್ದೀವಿಯನ್ ಡೆಮೊಕ್ರಟಿಕ್ ಪಾರ್ಟಿ(ಎಂಡಿಪಿ) ಸರಕಾರ ಶಮೀಮ್‍ರನ್ನು ನೇಮಕಗೊಳಿಸಿತ್ತು.
ಶಮೀಮ್ ಅವರ ಮೇಲೆ ದಾಳಿ ನಡೆದಿರುವುದನ್ನು ಖಂಡಿಸಿರುವ ಮಾಲ್ದೀವ್ಸ್‍ನ ಅತೀ ದೊಡ್ಡ ವಿರೋಧ ಪಕ್ಷ ಎಂಡಿಪಿ ಸರಕಾರದ ರಾಜೀನಾಮೆಗೆ ಆಗ್ರಹಿಸಿದೆ. `ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರ ಸರಕಾರ ಕ್ರಿಮಿನಲ್‍ಗಳನ್ನು ರಕ್ಷಿಸುತ್ತಿದೆ. ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಕ್ರಿಮಿನಲ್ ಗ್ಯಾಂಗ್‍ಗಳ ನಡುವಿರುವ ನಿಕಟ ಸಂಬಂಧಗಳು ಸರಕಾರದ ಉನ್ನತ ಅಧಿಕಾರಿಯ ಮೇಲೆ ಹಾಡಹಗಲೇ ರಸ್ತೆಯಲ್ಲಿ ನಡೆದ ಬಹಿರಂಗ ಹಿಂಸಾತ್ಮಕ ದಾಳಿಗೆ ಕಾರಣವಾಗಿದೆ' ಎಂದು ಆರೋಪಿಸಿದೆ.