ಮಾಲ್ಡೀವ್ಸ್ ಸಂಸದರ ಪರಸ್ಪರ ಹೊಡೆದಾಟ: ಮಾಲ್ಡೀವ್ಸ್ ಸಂಸತ್ತಿನಲ್ಲಿ ಕೋಲಾಹಲ
ಮಾಲೆ: ರವಿವಾರ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸಂಪುಟ ಸಚಿವರ ನೇಮಕಕ್ಕೆ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಕ್ರಮವಾಗಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಸಂಸದರ ನಡುವೆ ಘರ್ಷಣೆ ನಡೆದಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಅಂತರ್ಜಾಲದಲ್ಲಿ ಕಂಡು ಬರುತ್ತಿರುವ ವಿಡಿಯೊಗಳ ಪ್ರಕಾರ, ಸಂಸದರು ಪರಸ್ಪರ ಗುದ್ದಾಡಿಕೊಂಡಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ವ್ಯಾಪಕವಾಗಿ ಹಂಚಿಕೆಯಾಗಿರುವ ಕೆಲವು ವಿಡಿಯೊ ತುಣುಕುಗಳ ಪ್ರಕಾರ, ಕೆಲವು ಸಂಸದರು ಪರಸ್ಪರ ವೇದಿಕೆಯಿಂದ ಕೆಳಗೆ ತಳ್ಳಿಕೊಂಡಿರುವ ಘಟನೆಗಳೂ ಸೆರೆಯಾಗಿವೆ. ಈ ವಿಡಿಯೊವನ್ನು ಮಾಲ್ಡೀವ್ಸ್ ನ ಸ್ಥಳೀಯ ಸುದ್ದಿ ಸಂಸ್ಥೆಯಾದ ಅಧಂಧು ಕೂಡಾ ಹಂಚಿಕೊಂಡಿದೆ.
ಅಧಂಧು ಸುದ್ದಿ ಸಂಸ್ಥೆಯ ಪ್ರಕಾರ, ವಿರೋಧ ಪಕ್ಷಗಳ ಸಂಸದರನ್ನು ಆಡಳಿತಾರೂಢ ಪಕ್ಷದ ಸಂಸದರು ಸಂಸತ್ತನ್ನು ಪ್ರವೇಶಿಸುವುದರಿಂದ ತಡೆದಿದ್ದಾರೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯು, ಆಡಳಿತಾರೂಢ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝ್ಝು ಸಂಪುಟವನ್ನು ತನ್ನ ಪಕ್ಷದ ನಾಲ್ವರು ಸದಸ್ಯರು ಸೇರ್ಪಡೆಯಾಗುವುದಕ್ಕೆ ಅನುಮೋದನೆ ನೀಡದೆ ಇದ್ದುದರಿಂದ ಅವರು ಇಂತಹ ನಡೆ ಅನುಸರಿಸಿದರು ಎಂದು ಹೇಳಲಾಗಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪಿಎನ್‍ಸಿ ಮತ್ತು ಪಿಪಿಎಂ, ಎಂಡಿಪಿಯು ತನ್ನ ನಾಲ್ವರು ಸದಸ್ಯರು ಸಂಪುಟ ಸೇರ್ಪಡೆಯಾಗಲು ಅನುಮೋದನೆ ನೀಡದಿರುವ ನಡೆಯಿಂದ ಜನರಿಗೆ ಸೇವೆ ಒದಗಿಸಲು ತೊಂದರೆ ಉಂಟಾಗಿದೆ ಎಂದು ಹೇಳಿವೆ. ಸಂಸತ್ತಿನೊಳಗಿನ ಚಿತ್ರೀಕರಿಸಿರುವ ವಿಡಿಯೊಗಳಲ್ಲಿ ಸಂಸದರು ಪರಸ್ಪರ ನೆಲದ ಮೇಲೆ ಗುದ್ದಾಡುತ್ತಿರುವುದು ಹಾಗೂ ಓರ್ವ ಸಂಸದನ ಕೂದಲನ್ನು ಕೀಳುತ್ತಿರುವುದೂ ಸೆರೆಯಾಗಿದೆ.
ಕೂದಲು ಕೀಳಲ್ಪಟ್ಟ ಸಂಸದನು ಸಭಾಧ್ಯಕ್ಷರು ಸಂಸತ್ತನ್ನು ಉದ್ದೇಶಿಸಿ ಮಾತನಾಡದಂತೆ ತಡೆ ಒಡ್ಡಲು ತುತ್ತೂರಿಯಂಥ ವಾದನವನ್ನು ಊದುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.