ಸಾಲದ ಶೂಲದಲ್ಲಿ ಮಾಲ್ದೀವ್ಸ್: ಐಎಂಎಫ್ ಎಚ್ಚರಿಕೆ
ಕೊಲಂಬೊ: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಮಾಲ್ದೀವ್ಸ್, ಸಾಲದ ಸಂಕಷ್ಟಕ್ಕೆ ತುತ್ತಾಗುವ ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಿದೆಯೆಂದು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್)ಬುಧವಾರ ಎಚ್ಚರಿಕೆ ನೀಡಿದೆ. ಚೀನಾದಿಂದ ಭಾರೀ ಪ್ರಮಾಣದ ಸಾಲ ಪಡೆದಿರುವುದು ಮಾಲ್ದೀವ್ಸ್ ನ ಆರ್ಥಿಕತೆಗೆ ಕುತ್ತಾಗಿ ಪರಿಣಮಿಸಲಿದೆ ಎಂದು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಐಎಂಎಫ್ನ ಈ ಹೇಳಿಕೆ ಹೆಚ್ಚಿನ ಮಹತ್ವವನ್ನು ಪಡೆದಿದೆ.
ಆದರೆ ಮಾಲ್ದೀವ್ಸ್ ನ ವಿದೇಶಿ ಸಾಲದ ಕುರಿತ ವಿವರಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಬಹಿರಂಗಪಡಿಸಿಲ್ಲ. ಆದರೆ, ಆ ದೇಶದ ಆರ್ಥಿಕ ನೀತಿಯಲ್ಲಿ ತುರ್ತು ಹೊಂದಾಣಿಕೆ ಮಾಡಬೇಕಾದ ಅಗತ್ಯವನ್ನು ಐಎಂಎಫ್ ಪ್ರತಿಪಾದಿಸಿದೆ.
‘‘ಗಣನೀಯವಾದ ನೀತಿ ಬದಲಾವಣೆಗಳಿಲ್ಲದೆ ಮಾಲ್ದೀವ್ಸ್ ನ ಒಟ್ಟಾರೆ ವಿತ್ತೀಯ ಕೊರತೆ ಹಾಗೂ ಸಾರ್ವಜನಿಕ ಸಾಲದ ಪ್ರಮಾಣವು ಅಧಿಕಮಟ್ಚದಲ್ಲಿಯೇ ಉಳಿದುಕೊಂಡಿದೆ ಎಂದು ಐಎಂಎಫ್ ಹೇಳಿದೆ.
ಮುಯಿಝ್ಝು ಅವರ ರಾಜಕೀಯ ಗುರು, 2018ರವರೆಗೆ ಆಡಳಿತ ನಡೆಸಿದ್ದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ದೇಶದಲ್ಲಿ ವಿವಿಧ ನಿರ್ಮಾಣ ಯೋಜನೆಗಳಿಗಾಗಿ ಚೀನಾದಿಂದ ಭಾರೀ ಮೊತ್ತದ ಸಾಲವನ್ನು ಪಡೆದುಕೊಂಡಿದ್ದರು.
2021ರಲ್ಲಿಯೇ ಮಾಲ್ದೀವ್ಸ್ ಚೀನಾಗೆ 3 ಶತಕೋಟಿ ಡಾಲರ್ ಸಾಲವನ್ನು ಬಾಕಿಯಿರಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಮಾಲ್ದೀವ್ಸ್ ನಲ್ಲಿ ನಿಯೋಜಿತವಾಗಿರುವ ಭಾರತೀಯ ಸೇನಾಪಡೆಗಳು ಮೇ 10ರೊಳಗೆ ದೇಶವನ್ನು ತೊರೆಯಬೇಕೆಂದು ಮುಯಿಝ್ಝು ಮನವಿ ಮಾಡಿದ್ದಾರೆ ಹಾಗೂ ತನ್ನ ದೇಶದ ವಿಶಾಲವಾದ ಸಾಗರಯಾನ ಪ್ರದೇಶವನ್ನು ರಕ್ಷಿಸಲು ಸೇನಾಪಡೆಯನ್ನು ಬಲಿಷ್ಠಗೊಳಿಸುವುಆಗಿ ಪ್ರತಿಜ್ಞೆ ಮಾಡಿದ್ದಾರೆ.