ಮಾಲ್ದೀವ್ಸ್: ಅಧ್ಯಕ್ಷ ಮುಯಿಝು ವಿರುದ್ಧ ವಾಗ್ದಂಡನೆ ನಿರ್ಣಯಕ್ಕೆ ವಿರೋಧ ಪಕ್ಷಗಳ ನಿರ್ಧಾರ
ಮಾಲೆ: ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ವಿರುದ್ಧ ಸಂಸತ್ನಲ್ಲಿ ಮಹಾಭಿಯೋಗ(ವಾಗ್ದಂಡನೆ) ನಿರ್ಣಯ ಮಂಡಿಸಲು ಬಹುಮತ ಹೊಂದಿರುವ ಪ್ರಮುಖ ವಿರೋಧ ಪಕ್ಷ `ಮಾಲ್ದೀವ್ಸ್ ಡೆಮೊಕ್ರಟಿಕ್ ಪಕ್ಷ'(ಎಂಡಿಪಿ) ನಿರ್ಧರಿಸಿದ್ದು ದ್ವೀಪರಾಷ್ಟ್ರ ರಾಜಕೀಯ ಬಿಕ್ಕಟ್ಟಿನತ್ತ ಸಾಗುವ ಸಾಧ್ಯತೆಯಿದೆ ಎಂದು `ಸನ್ ಆನ್ಲೈನ್ ಇಂಟರ್ನ್ಯಾಷನಲ್' ಸುದ್ಧಿಸಂಸ್ಥೆ ವರದಿ ಮಾಡಿದೆ.
ಮಹಾಭಿಯೋಗ ಮಂಡನೆಗೆ ಅಗತ್ಯವಿರುವಷ್ಟು ಸದಸ್ಯರ ಸಹಿಯನ್ನು ಸಂಗ್ರಹಿಸಲಾಗಿದ್ದು ಮತ್ತೊಂದು ಪ್ರಮುಖ ವಿಪಕ್ಷ `ಡೆಮೊಕ್ರಾಟಿಕ್' ಪಕ್ಷವೂ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ. ನಿರ್ಣಯವನ್ನು ಇದುವರೆಗೆ ಮಂಡಿಸಲಾಗಿಲ್ಲ ಎಂದು ಎಂಡಿಪಿ ಸಂಸದರು ಹೇಳಿದ್ದಾರೆ.
ಸರಕಾರವನ್ನು ಬೆಂಬಲಿಸುತ್ತಿರುವ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್(ಪಿಎನ್ಸಿ) ಮತ್ತು ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ದೀವ್ಸ್(ಪಿಪಿಎಂ) ಪಕ್ಷದ ಸದಸ್ಯರು ರವಿವಾರ ಮಾಲ್ದೀವ್ಸ್ ಸಂಸತ್ನ ಅಧಿವೇಶನಕ್ಕೆ ತಡೆಯೊಡ್ಡಿ ಸ್ಪೀಕರ್ ಜತೆ ಘರ್ಷಣೆಗೆ ಮುಂದಾದ ವಿದ್ಯಮಾನದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಧ್ಯಕ್ಷರನ್ನು ವಾಗ್ದಂಡನೆಗೆ ಒಳಪಡಿಸುವ ನಿರ್ಣಯಕ್ಕೆ ಇದುವರೆಗೆ 34 ಸಂಸದರು ಬೆಂಬಲ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಎಂಡಿಪಿ 43 ಸದಸ್ಯರನ್ನು ಮತ್ತು ಡೆಮೊಕ್ರಾಟ್ಸ್ 13 ಸದಸ್ಯರನ್ನು ಹೊಂದಿದೆ. ವಾಗ್ದಂಡನೆ ನಿರ್ಣಯ ಮಂಡನೆಯನ್ನು ಸುಲಭಗೊಳಿಸುವ ತಿದ್ದುಪಡಿ ಮಸೂದೆಯನ್ನು ಮಾಲ್ದೀವ್ಸ್ ಸಂಸತ್ ಇತ್ತೀಚೆಗೆ ಅನುಮೋದಿಸಿರುವುದು ವಿರೋಧ ಪಕ್ಷಗಳಿಗೆ ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ನಿರ್ಣಯಕ್ಕೆ 56 ಸದಸ್ಯರು ಸಹಿ ಹಾಕಿದರೆ ಅಧ್ಯಕ್ಷರನ್ನು ವಾಗ್ದಂಡನೆಗೆ ಒಳಗಾಗಿಸಬಹುದಾಗಿದೆ.
ಈ ಮಧ್ಯೆ, ಪಿಎನ್ಸಿ ಮತ್ತು ಪಿಪಿಎಂ ಪಕ್ಷಗಳು ಸ್ಪೀಕರ್ ಮುಹಮ್ಮದ್ ಅಸ್ಲಾಮ್ ಮತ್ತು ಉಪಸ್ಪೀಕರ್ ಅಹ್ಮದ್ ಸಲೀಮ್(ಇಬ್ಬರೂ ಎಂಡಿಪಿ ಸದಸ್ಯರು)ರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು ಇದನ್ನು 23 ಸಂಸದರು ಅನುಮೋದಿಸಿದ್ದಾರೆ.