ವಿದೇಶಿ ಪಡೆಗಳನ್ನು ವಾಪಾಸು ಕಳುಹಿಸುತ್ತೇವೆ ಮಾಲ್ದೀವ್ಸ್ ಅಧ್ಯಕ್ಷರ ಘೋಷಣೆ
ಮಾಲೆ: ತಮ್ಮ ದೇಶದಲ್ಲಿ ವಿದೇಶಿ ಮಿಲಿಟರಿ ಉಪಸ್ಥಿತಿಯನ್ನು ಅಂತ್ಯಗೊಳಿಸುವುದಾಗಿ ಮಾಲ್ದೀವ್ಸ್ ನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮುಹಮ್ಮದ್ ಮುಯಿಝು ಘೋಷಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ನಡೆಸಿದ ಪ್ರಥಮ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮುಯಿಝು ` ಮಾಲ್ದೀವ್ಸ್ನಲ್ಲಿ ನೆಲೆ ಹೊಂದಿರುವ ವಿದೇಶಿ ಪಡೆಗಳನ್ನು ಕಾನೂನಿನ ಪ್ರಕಾರ ವಾಪಾಸು ಕಳುಹಿಸುತ್ತೇವೆ. ಹೀಗೆ ಮಾಡುವುದರಲ್ಲಿ ಅನುಮಾನವಿಲ್ಲ' ಎಂದಿದ್ದಾರೆ. ಈ ಮೂಲಕ ಮಾಲ್ದೀವ್ಸ್ನಲ್ಲಿ ಸೇನಾನೆಲೆ ಹೊಂದಿರುವ ಏಕೈಕ ವಿದೇಶಿ ಶಕ್ತಿಯಾಗಿರುವ ಭಾರತದ ಹೆಸರೆತ್ತದೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ರಾಜಧಾನಿ ಮಾಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು `ಇಲ್ಲಿಗೆ ಮಿಲಿಟರಿ ಪಡೆಗಳನ್ನು ತಂದವರಿಗೆ ಅದನ್ನು ವಾಪಾಸು ಕಳುಹಿಸಲು ಮನಸಿಲ್ಲ. ಆದರೆ ಮಾಲ್ದೀವ್ಸ್ನ ಜನತೆ ನಿರ್ಧರಿಸಿದ್ದಾರೆ' ಎಂದರು.
ತಾನು ಚೀನಾ ಪರ ಮುಖಂಡ ಎಂಬ ಮಾಧ್ಯಮಗಳ ವರದಿಯನ್ನು ನಿರಾಕರಿಸಿದ ಮುಯಿಝು, ತಾನು ಮಾಲ್ದೀವ್ಸ್ ಪರ ಎಂದರು. `ಮಾಲ್ದೀವ್ಸ್ ಮತ್ತು ಅದರ ಪರಿಸ್ಥಿತಿ ನನ್ನ ಪ್ರಥಮ ಆದ್ಯತೆಯಾಗಿದೆ. ನಾವು ಮಾಲ್ದೀವ್ಸ್ ಪರ ಆಯ್ಕೆ ಮಾಡುತ್ತೇವೆ. ಮಾಲ್ದೀವ್ಸ್ ಪರ ನೀತಿಯನ್ನು ಗೌರವಿಸುವ ಮತ್ತು ಪಾಲಿಸುವ ಯಾವುದೇ ದೇಶವನ್ನು ಮಾಲ್ದೀವ್ಸ್ನ ಆಪ್ತ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ ' ಎಂದವರು ಹೇಳಿದ್ದಾರೆ. ಮಾಲ್ದೀವ್ಸ್ ಅತ್ಯಂತ ಸಣ್ಣ ದೇಶವಾಗಿದ್ದರೂ ಆಯಕಟ್ಟಿನ ಪ್ರದೇಶದಲ್ಲಿದೆ ಮತ್ತು ಸಮಭಾಜಕದ ಉದ್ದಕ್ಕೂ 800 ಕಿ.ಮೀ ಹರಡಿರುವ ಹವಳಗಳ ಸರಪಳಿ ಮತ್ತು ಆಕರ್ಷಕ ಬೀಚ್ಗಳಿಗೆ ಪ್ರಸಿದ್ಧವಾಗಿದೆ. ಇದು ಪ್ರಪಂಚದ ಅತ್ಯಂತ ಬಿಡುವಿಲ್ಲದ ಪೂರ್ವ-ಪಶ್ಚಿಮ ಜಲಮಾರ್ಗಗಳಲ್ಲಿ ಒಂದಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಮುಯಿಝುರನ್ನು ಅಭಿನಂದಿಸಿರುವ ಭಾರತ `ಭಾರತ-ಮಾಲ್ದೀವ್ಸ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಬದ್ಧ' ಎಂದಿದೆ. ಮುಯಿಝುರನ್ನು ಅಭಿನಂದಿಸಿರುವ ಚೀನಾ `ತಾನು ಮಾಲ್ದೀವ್ಸ್ ಜನತೆಯ ಆಯ್ಕೆಯನ್ನು ಗೌರವಿಸುತ್ತೇನೆ' ಎಂದಿದೆ. ಸಾಂಪ್ರದಾಯಿಕ ಸ್ನೇಹವನ್ನು ಕ್ರೋಢೀಕರಿಸಲು, ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಗಾಢವಾಗಿಸಲು ಮತ್ತು ನಿರಂತರ ಹೊಸ ಪ್ರಗತಿಯತ್ತ ಮುನ್ನಡೆಸಲು ಮಾಲ್ದೀವ್ಸ್ ಜತೆ ಕೆಲಸ ಮಾಡಲು ಚೀನಾ ಸಿದ್ಧವಿದೆ' ಎಂದು ಚೀನಾದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.
ಚೀನಾ ಪರ ಒಲವು
ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್ ಸಾಂಪ್ರದಾಯಿಕ ಹಿತಚಿಂತಕ ಭಾರತದೊಂದಿಗೆ ರಾಷ್ಟ್ರದ ಸಂಬಂಧಗಳನ್ನು ಮರುಹೊಂದಿಸಿದ್ದರು. ಆದರೆ ಅವರ ಪೂರ್ವಾಧಿಕಾರಿ ಅಬ್ದುಲ್ಲಾ ಯಮೀನ್ ಮಾಲ್ದೀವ್ಸ್ ಅನ್ನು ಚೀನಾದ ಪ್ರಭಾವಲಯದೊಳಗೆ ಸೇರಿಸಿದ ನಂತರ ಮೂಲಸೌಕರ್ಯ ಯೋಜನೆಗಳಿಗೆ ಚೀನಾದಿಂದ ಭಾರೀ ಸಾಲ ಪಡೆದಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಯಮೀನ್ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬಳಿಕ ಅವರ ಅಧಿಕೃತ ಪ್ರತಿನಿಧಿ ಎಂದು ಪರಿಗಣಿತರಾದ ಮುಯಿಝು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಗೆಲುವು ಪಡೆದ ಬಳಿಕ ಅವರು ಮಾಡಿದ ಮೊದಲ ಕೆಲಸವೆಂದರೆ, 11 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಯಮೀನ್ರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಗೃಹಬಂಧನಕ್ಕೆ ವರ್ಗಾಯಿಸಿದ್ದು.