ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಗೆ ಅಪೌಷ್ಟಿಕತೆ!

Update: 2024-11-09 15:29 GMT

ಸುನೀತಾ ವಿಲಿಯಮ್ಸ್ |     PC : PTI

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ (ಐಎಸ್ಎಸ್) ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರ ಫೋಟೋವನ್ನು ನಾಸಾ ಬಿಡುಗಡೆ ಮಾಡಿದ್ದು, ಇದು ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದೆ.

ಎಂಟು ದಿನಗಳ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಮ್ಮಿಕೊಂಡಿದ್ದ ಈ ಇಬ್ಬರು ಗಗನಯಾತ್ರಿಗಳು ಸದ್ಯ ಆರು ತಿಂಗಳಾದರೂ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗುವಾಗುತ್ತಿರುವ ನಡುವೆಯೇ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರು ಇತ್ತೀಚಿನ ಫೋಟೋದಲ್ಲಿ ಸಾಕಷ್ಟು ತೆಳ್ಳಗೆ ಕಾಣುತ್ತಿದ್ದಾರೆ. ಚಿತ್ರ ನೋಡಿದರೆ ಸುನಿತಾ ವಿಲಿಯಮ್ಸ್ ತೂಕ ಇಳಿಸಿಕೊಂಡಂತೆ ಹಾಗು ಅಪೌಷ್ಟಿಕತೆಯಿಂದ ಆರೋಗ್ಯವೂ ಹದಗೆಟ್ಟಂತೆ ಕಾಣಿಸಿಕೊಳ್ಳುತ್ತಿದೆ.

ನಾಸಾ ಪ್ರತಿಕ್ರಿಯೆ:

ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆಯೇ ನಾಸಾ ವಕ್ತಾರ ಜಿಮ್ಮಿ ರಸೆಲ್ ಪ್ರತಿಕ್ರಿಯಿಸಿದ್ದು, ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಸದ್ಯ ಆರೋಗ್ಯವಾಗಿದ್ದಾರೆ ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೂ ಒಳಗಾಗುತ್ತಿದ್ದಾರೆ ಅವರ ಆರೋಗ್ಯ ತಪಾಸಣೆಯನ್ನು ಫ್ಲೈಟ್ ಸರ್ಜನ್ ನಡೆಸುತ್ತಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ವೈದ್ಯರು ಹೇಳುವುದೇನು?

ಅಮೆರಿಕದ ಉಸಿರಾಟ ಸಂಬಂಧಿ ರೋಗಗಳ ತಜ್ಞ ಡಾ.ವಿನಯ್ ಗುಪ್ತಾ ಮಾತನಾಡಿ, ಅವರು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ದುರ್ಬಲರಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ದಿನಕ್ಕೆ ಕನಿಷ್ಠ 2.5 ಗಂಟೆಗಳ ಕಾಲ ವ್ಯಾಯಾಮ ಮಾಡಿದರೆ ಗಗನಯಾತ್ರಿಗಳು ತಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆಯುವ ಜನರು ರಕ್ತಹೀನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ ಕೆಂಪು ರಕ್ತ ಕಣಗಳು ಖಾಲಿಯಾಗಿ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನಲಾಗಿದೆ.

2025ರಲ್ಲಿ ವಾಪಾಸ್ ಕರೆತರಲು ಪ್ರಯತ್ನ!

ವಿಲಿಯಮ್ಸ್ ಮತ್ತು ವಿಲ್ಮೋರ್ ಇಬ್ಬರು SpaceX Crew-9 ಮಿಷನ್ ಸದಸ್ಯರೊಂದಿಗೆ ಭೂಮಿಗೆ ವಾಪಾಸ್ ಕರೆತರುವ ಸಾಧ್ಯತೆ ಇದೆ. ಆದರೆ ವರದಿಗಳ ಪ್ರಕಾರ ಫೆಬ್ರವರಿ 2025 ರವರೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ನಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರಿಂದ ದೀರ್ಘಕಾಲದವರೆಗೆ ವಿಕಿರಣಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ಇದರಿಂದ ಗಗನಯಾತ್ರಿಗಳ ಮೂಳೆ, ದೇಹದ ಕೊಬ್ಬು ಮತ್ತು ಸ್ನಾಯುವಿನ ಶಕ್ತಿ ಕಡಿಮೆಯಾಗುತ್ತದೆ. ಇದಲ್ಲದೆ ದೃಷ್ಟಿ ಸಮಸ್ಯೆಗಳು, ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ:

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಇವರು ಕೇವಲ 8 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಉಳಿದು ಪುನಃ ಅದೇ ಬಾಹ್ಯಾಕಾಶ ನೌಕೆಯ ಮೂಲಕ ವಾಪಾಸ್ ಬರಬೇಕಿತ್ತು. ಆದ್ರೆ, ಐಎಸ್ಎಸ್ ಗೆ ಹೋಗುವ ಮಾರ್ಗಮಧ್ಯೆ ಬಾಹ್ಯಾಕಾಶ ನೌಕೆಯಿಂದ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳು ಉಂಟಾಗಿದೆ. ಇದಾದ ಬಳಿಕ ನೌಕೆಯಲ್ಲಿ ಸುರಕ್ಷಿತವಾಗಿ ವಾಪಾಸ್ಸಾಗುವ ಬಗ್ಗೆ ಪ್ರಶ್ನೆ ಮೂಡಿದ್ದರಿಂದ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News