ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದ ಎಫ್‌ಬಿಐ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಬೆದರಿಕೆಯೊಡ್ಡಿದ್ದ ವ್ಯಕ್ತಿಯೊಬ್ಬನನ್ನು ಎಫ್‌ಬಿಐ ಸಿಬ್ಬಂದಿಗಳು ಬುಧವಾರ ಗುಂಡಿಕ್ಕಿ ಸಾಯಿಸಿದ್ದಾರೆ. ಬೈಡನ್ ಅವರ ಉಟಾಹ್ ಭೇಟಿಗೆ ಕೆಲವೇ ಗಂಟೆಗಳಿಗೆ ಮುನ್ನ ಈ ಘಟನೆ ನಡೆದಿದೆ. ಈತನ ವಿರುದ್ಧ ತನಿಖಾ ಏಜನ್ಸಿಗಳು ಸಾಲ್ಟ್ ಲೇಕ್ ಸಿಟಿಯ ಪ್ರೊವೊ ಎಂಬಲ್ಲಿನ ಆತನ ನಿವಾಸಕ್ಕೆ ಬಂಧನ ಮತ್ತು ಸರ್ಚ್ ವಾರಂಟ್‌ಗಳನ್ನು ತಲುಪಿಸಲು ಈ ಹಿಂದೆ ಯತ್ನ ನಡೆಸಿದ್ದವು.
ಹತ್ಯೆಗೈಯ್ಯಲಾದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಉಟಾಹ್‌ದಲ್ಲಿನ ಫೆಡರಲ್ ಪ್ರಾಸಿಕ್ಯೂಟರ್‌ಗಳು ದಾಖಲಿಸಿದ್ದ ದೂರಿನಲ್ಲಿ ಆತನ ಹೆಸರನ್ನು ಕ್ರೈಗ್ ರಾಬರ್ಟ್‌ಸನ್ ಎಂದು ಉಲ್ಲೇಖಿಸಲಾಗಿತ್ತು.
ಸುಮಾರು 70 ವರ್ಷ ಪ್ರಾಯದ ಈತ ತನ್ನನ್ನು “ಟ್ರಂಪರ್” ಎಂದು ಗುರುತಿಸಿಕೊಂಡಿದ್ದಾನಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಬೈಡನ್ ಮತ್ತು ಇತರರಿಗೆ ಬೆದರಿಕೆಯೊಡ್ಡಿದ್ದ.
“ಬೈಡನ್ ಉಟಾಹ್‌ಗೆ ಬರುತ್ತಿದ್ದಾರೆಂದು ಕೇಳಿಪಟ್ಟೆ, ಎಂ24 ಸ್ನೈಪರ್ ರೈಫಲ್‌ನ ಧೂಳನ್ನು ಒರೆಸುತ್ತಿದ್ದೇನೆ, ಸ್ವಾಗತ, ಬಫೂನ್-ಇನ್-ಚೀಫ್” ಎಂದು ಆತ ಬರೆದಿದ್ದ.
ಬೈಡನ್ ಹೊರತಾಗಿ ಆತ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಅಟಾರ್ನಿ ಜನರಲ್ ಮೆರ್ರಿಕ್ ಗಾರ್ಲಂಡ್ ಅವರಿಗೂ ಬೆದರಿಕೆಯೊಡ್ಡಿದ್ದ.
“ಅಧ್ಯಕ್ಷರ ಹತ್ಯೆ ಅಥವಾ ಇಬ್ಬರ ಹತ್ಯೆಗೆ ಸಮಯ ಪಕ್ವವಾಗಿದೆ., ಮೊದಲು ಜೋ, ನಂತರ ಕಮಲಾ,” ಎಂದೂ ಆತ ಬರೆದಿದ್ದ. ಪೋರ್ನ್ ತಾರೆಯೊಬ್ಬರಿಗೆ ಚುನಾವಣಾ ಪೂರ್ವ ಹಣ ನೀಡಿದ್ದರೆಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆರೋಪ ಹೊರಿಸಿದ್ದ ಮ್ಯಾನ್‌ಹಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರನ್ನೂ ಆತ ಬೆದರಿಸಿದ್ದ.
ಅಷ್ಟೇ ಅಲ್ಲದೆ ತನ್ನ ವಿಸ್ತಾರವಾದ ಬಂದೂಕು ಸಂಗ್ರಹದ ಚಿತ್ರಗಳನ್ನೂ ಆತ ಪೋಸ್ಟ್ ಮಾಡಿದ್ದ.