ಸುಡಾನ್ ಸಂಷರ್ಘ: 800ಕ್ಕೂ ಹೆಚ್ಚು ಮಂದಿ ಮೃತ್ಯು
ಖಾರ್ಟಮ್: ಸುಡಾನಿನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ಸಂಘರ್ಷ ಮುಂದುವರಿದಿದ್ದು ಸಂಘರ್ಷ ಪೀಡಿತ ದರ್ಫುರ್ ನಗರದ ಮೇಲಿನ ದಾಳಿಯಲ್ಲಿ 800ಕ್ಕೂ ಅಧಿಕ ಜನತೆ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
ಪಶ್ಚಿಮ ದರ್ಫುರ್ ಪ್ರಾಂತದ ರಾಜಧಾನಿ ಜಿನೈನಾದ ಬಳಿಯಿರುವ ಅರ್ದಾಮತ್ ನಗರದ ಮೇಲೆ ಅರೆಸೇನಾ ಪಡೆ ದಾಳಿ ನಡೆಸಿದ್ದು 800ಕ್ಕೂ ಅಧಿಕ ಮಂದಿ ಮೃತಪಟ್ಟು ಇತರ 8000 ಮಂದಿ ನೆರೆಯ ಚಾಡ್ ದೇಶಕ್ಕೆ ಪಲಾಯನ ಮಾಡಿದ್ದಾರೆ. ಈ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಸುಮಾರು 100 ನಿರಾಶ್ರಿತರ ಶಿಬಿರಕ್ಕೆ ನುಗ್ಗಿದ ಆಕ್ರಮಣಕಾರರು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಸಾಮಾಗ್ರಿಗಳನ್ನು ದೋಚಿದ್ದಾರೆ. ಇದು 20 ವರ್ಷದ ಹಿಂದೆ ದರ್ಫುರ್ ಪ್ರಾಂತದಲ್ಲಿ ನಡೆದ ಭಯಾನಕ ದೌರ್ಜನ್ಯವನ್ನು ನೆನಪಿಸಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ಫಿಲಿಪೊ ಗ್ರಾಂಡಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರೆಸೇನಾ ಪಡೆ ದರ್ಫುರ್ನಲ್ಲಿ ಮುನ್ನಡೆ ಸಾಧಿಸಿದ್ದು ಈ ವಲಯಾದ್ಯಂತ ಹಲವು ನಗರಗಳು ಹಾಗೂ ಪಟ್ಟಣಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಎಪ್ರಿಲ್ ಮಧ್ಯಭಾಗದಿಂದ ಸುಡಾನ್ ನಲ್ಲಿ ಸಂಘರ್ಷ ಭುಗಿಲೆದ್ದಿದ್ದು ಇದುವರೆಗೆ ಸುಮಾರು 9000 ಮಂದಿ ಸಾವನ್ನಪ್ಪಿದ್ದಾರೆ. 6 ದಶಲಕ್ಷಕ್ಕೂ ಅಧಿಕ ಮಂದಿ ಬಲವಂತದಿಂದ ಸ್ಥಳಾಂತರಗೊಂಡಿದ್ದು ಇದರಲ್ಲಿ 1.2 ದಶಲಕ್ಷ ಮಂದಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.