ಮ್ಯಾನ್ಮಾರ್: ಯುದ್ಧವಿಮಾನ ಪತನ ಹೊಣೆಹೊತ್ತ ಬಂಡುಕೋರರು
ಯಾಂಗಾನ್ : ಮ್ಯಾನ್ಮಾರ್ನಲ್ಲಿ ಸೇನಾಡಳಿತ ಮತ್ತು ಬಂಡುಕೋರ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಪೂರ್ವ ಮ್ಯಾನ್ಮಾರ್ನಲ್ಲಿ ಸೇನೆಯ ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಬಂಡುಕೋರರು ಹೇಳಿದ್ದು ಯುದ್ಧವಿಮಾನ ಪತನಗೊಂಡಿರುವುದನ್ನು ಸೇನೆಯೂ ದೃಢಪಡಿಸಿದೆ.
2021ರಿಂದ ಮ್ಯಾನ್ಮಾರ್ನಲ್ಲಿ ಸೇನಾಡಳಿತವಿದೆ. ಆದರೆ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಹಾಗೂ ಸೇನಾಡಳಿತವನ್ನು ವಿರೋಧಿಸುವ ಸಶಸ್ತ್ರ ಗುಂಪುಗಳು ಅಪರೂಪದ ಸಮನ್ವಯದೊಂದಿಗೆ ನಡೆಸುತ್ತಿರುವ ಬಂಡಾಯ ಚಟುವಟಿಕೆ ಸೇನಾಡಳಿತಕ್ಕೆ ತೀವ್ರ ಇಕ್ಕಟ್ಟು ತಂದಿರಿಸಿದೆ. ಬಂಡಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾಗಿರುವ ಕಾರಣ ದೇಶವು ಒಡೆಯುವ ಅಪಾಯದಲ್ಲಿದೆ ಎಂದು ಮಿಲಿಟರಿ ಸ್ಥಾಪಿಸಿದ ಅಧ್ಯಕ್ಷರು ಕಳೆದ ವಾರ ಹೇಳಿದ್ದರು.
ಮಿಲಿಟರಿ ಮತ್ತು ‘ಕರೆನ್ನಿ ನ್ಯಾಷನಾಲಿಟೀಸ್ ಡಿಫೆನ್ಸ್ ಫೋರ್ಸ್(ಕೆಎನ್ಡಿಎಫ್) ನಡುವೆ ಥೈಲ್ಯಾಂಡ್ ಗಡಿಭಾಗದ ಕಯಾಹ್ ರಾಜ್ಯದಲ್ಲಿ ನಡೆದ ಘರ್ಷಣೆಯ ಸಂದರ್ಭ ಯುದ್ಧವಿಮಾನ ಪತನಗೊಂಡಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಯುದ್ಧವಿಮಾನ ಪತನಗೊಂಡಿದ್ದು ಪೈಲಟ್ ಗಳು ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ ಎಂದು ಸೇನಾಡಳಿತದ ವಕ್ತಾರ ಝಾವ್ ಮಿನ್ಟುನ್ ಹೇಳಿದ್ದಾರೆ. ಈ ಮಧ್ಯೆ, ಮ್ಯಾನ್ಮಾರ್ನ ಈಶಾನ್ಯದಲ್ಲಿ ಚೀನಾದ ಗಡಿಗೆ ಹೊಂದಿಕೊಂಡಿರುವ ಶಾನ್ ರಾಜ್ಯದಲ್ಲಿ ಮೂರು ಜನಾಂಗೀಯ ಅಲ್ಪಸಂಖ್ಯಾತ ಬಂಡುಕೋರ ಗುಂಪುಗಳು ಜಂಟಿಯಾಗಿ ನಡೆಸಿರುವ ಆಕ್ರಮಣದ ಬಳಿಕ ಕನಿಷ್ಠ 50,000 ಜನತೆ ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿದ್ದು ಹಲವು ಪ್ರಮುಖ ರಸ್ತೆಗಳು ಹಾಗೂ ನಗರಗಳ ಸಂಪರ್ಕ ಕಡಿತಗೊಂಡಿವೆ ಎಂದು ವರದಿಯಾಗಿದೆ.