ನೇಟೊ, ಉಕ್ರೇನ್‌ನ ಮಿತ್ರನೇ ಎನ್ನುವುದನ್ನು ಬೇಗ ನಿರ್ಧರಿಸಬೇಕು : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಕೀವ್ (ಉಕ್ರೇನ್): ತಾನು ಉಕ್ರೇನ್ನ ಮಿತ್ರನೇ ಎನ್ನುವುದನ್ನು ನೇಟೊ ನಿರ್ಧರಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಹೇಳಿದ್ದಾರೆ. ರಶ್ಯ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ತನ್ನ ಪಡೆಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಹೆಚ್ಚಿಸುವಂತೆ ಅವರು ನೇಟೊ ದೇಶಗಳ ರಕ್ಷಣಾ ಸಚಿವರನ್ನು ಒತ್ತಾಯಿಸಿದ್ದಾರೆ.
ಕನಿಷ್ಠ ಇನ್ನು ಏಳು ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವಂತೆ ಝೆಲೆನ್ಸ್ಕಿ ತನ್ನ ಪಾಶ್ಚಾತ್ಯ ಭಾಗೀದಾರರಿಗೆ ಮನವಿ ಮಾಡಿದರು. ರಶ್ಯವು ಉಕ್ರೇನ್ನಾದ್ಯಂತ ಮಾರಕ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಸರಣಿಯನ್ನು ಆರಂಭಿಸಿದ ಗಂಟೆಗಳ ಬಳಿಕ ಅವರು ಈ ಮನವಿ ಮಾಡಿದ್ದಾರೆ.
ಉಕ್ರೇನ್ನ ಪೂರ್ವದ ನಿಪ್ರೊಪೆಟ್ರೊವ್ಸ್ಕ್ ವಲಯದಲ್ಲಿ ರಶ್ಯ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
‘‘ನಮ್ಮ ಆಕಾಶವು ಮತ್ತೊಮ್ಮೆ ಸುರಕ್ಷಿತವಾಗಬೇಕು’’ ಎಂದು ಬ್ರಸೆಲ್ಸ್ನಲ್ಲಿ ನಡೆದ ನೇಟೊ ರಕ್ಷಣಾ ಸಚಿವರ ಸಮ್ಮೇಳನವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ ನುಡಿದರು. ‘‘ಅದು ಸಂಪೂರ್ಣವಾಗಿ ನಿಮ್ಮನ್ನು ಅವಲಂಬಿಸಿದೆ. ಪಾಶ್ಚಿಮಾತ್ಯ ಬೆಂಬಲವಿಲ್ಲದೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
‘‘ವಾಯು ದಾಳಿಯಲ್ಲಿ ರಶ್ಯ ಬಲಿಷ್ಠವಾಗಿದೆ. ಅದು ಡ್ರೋನ್ ಮತ್ತು ರಾಕೆಟ್ಗಳ ಮೂಲಕ ಭಯೋತ್ಪಾದನೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ದುರದೃಷ್ಟವಶಾತ್ ನೆಲದಲ್ಲಿ ನಮ್ಮ ಸಾಮರ್ಥ್ಯಗಳು ಸೀಮಿತವಾಗಿವೆ’’ ಎಂದು ಉಕ್ರೇನ್ ಅಧ್ಯಕ್ಷ ಹೇಳಿದರು.
ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ನೀಡಲು ನೇಟೊ ಒಪ್ಪಿಗೆ
ಇದಕ್ಕೂ ಮುನ್ನ, ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ನೀಡಲು ನೇಟೊ ಒಪ್ಪಿಕೊಂಡಿದೆ ಎಂದು ಶುಕ್ರವಾರ ಬೆಳಗ್ಗೆ ನೇಟೊ ಮುಖ್ಯಸ್ಥ ಜೆನ್ಸ್ ಸ್ಟೋಲ್ಟನ್ಬರ್ಗ್ ಹೇಳಿದ್ದರು.
‘‘ಉಕ್ರೇನ್ಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವುದಕ್ಕೆ ಸಂಬಂಧಿಸಿ ಶೀಘ್ರವೇ ಹೊಸ ಪ್ರಕಟನೆಗಳನ್ನು ನಾನು ನಿರೀಕ್ಷಿಸುತ್ತಿದ್ದೇನೆ’’ ಎಂದು ಅವರು ತಿಳಿಸಿದರು.