ರಶ್ಯವನ್ನು ಸೋಲಿಸಲಾಗದೆಂದು ನೇಟೊಗೆ ಅರಿವಾಗಿದೆ: ಪುಟಿನ್
ಮಾಸ್ಕೋ : ಉಕ್ರೇನ್ನಲ್ಲಿ ರಶ್ಯವನ್ನು ಸೋಲಿಸುವುದು ಸಾಧ್ಯವಾಗದ ಮಾತು ಮತ್ತು ಅಲ್ಲಿ ರಶ್ಯದ ಪ್ರಾದೇಶಿಕ ಮುನ್ನಡೆಯನ್ನು ನೇಟೊ ಒಪ್ಪಿಕೊಳ್ಳಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಗ್ರಹಿಸಿದ್ದಾರೆ.
ಯುದ್ಧರಂಗದಲ್ಲಿ ರಶ್ಯಕ್ಕೆ ವ್ಯೂಹಾತ್ಮಕ ಸೋಲುಣಿಸುವ ಬಗ್ಗೆ ಹೇಳಿಕೆಗಳ ಅಬ್ಬರವಿದೆ. ಆದರೆ ರಶ್ಯವನ್ನು ಸೋಲಿಸುವುದು ಅಸಾಧ್ಯ ಎಂಬುದು ಪಾಶ್ಚಿಮಾತ್ಯರು ಹಾಗೂ ನೇಟೊಗೆ ಅರಿವಾಗಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪುಟಿನ್ ಪ್ರತಿಪಾದಿಸಿದ್ದಾರೆ.
ಪೋಲ್ಯಾಂಡ್ ಮೇಲೆ ದಾಳಿ ನಡೆಸುವ ಯೋಜನೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುಟಿನ್ `ಪೋಲ್ಯಾಂಡ್ ಅಥವಾ ಲಾತ್ವಿಯಾದ ಮೇಲೆ ದಂಡೆತ್ತಿ ಹೋಗುವ ಯೋಜನೆಯನ್ನು ರಶ್ಯ ಹೊಂದಿಲ್ಲ. ಉಕ್ರೇನ್ ಸಂಘರ್ಷ ವಿಸ್ತಾರಗೊಳ್ಳುವುದನ್ನು ನಾವು ಬಯಸುವುದಿಲ್ಲ. ನಮಗೆ ಆ ಆಸಕ್ತಿಯೂ ಇಲ್ಲ. ನಾವ್ಯಾಕೆ ಹಾಗೆ ಮಾಡಬೇಕು ? ಎಂದು ಪ್ರಶ್ನಿಸಿದರು.ಪಾಶ್ಚಿಮಾತ್ಯರಿಗೆ ರಶ್ಯ-ಉಕ್ರೇನ್ ಯುದ್ಧ ಅಂತ್ಯಗೊಳ್ಳಬೇಕೆಂದು ನಿಜವಾಗಿಯೂ ಕಾಳಜಿಯಿದ್ದರೆ ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸಲಿ. ಆಗ ಒಂದು ವಾರದೊಳಗೆ ಯುದ್ಧ ಕೊನೆಗೊಳ್ಳಲಿದೆ ಎಂದು ಪುಟಿನ್ ಹೇಳಿದ್ದಾರೆ. ಉಕ್ರೇನ್ನಲ್ಲಿನ ಸಂಘರ್ಷವು ಜಾಗತಿಕ ಯುದ್ಧವಾಗಿ ಅಥವಾ ಪರಮಾಣು ಸಂಘರ್ಷವಾಗಿ ಉಲ್ಬಣಗೊಳ್ಳುವ ಭೀತಿಯಿದೆ ಎಂಬ ನೇಟೊ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, ರಶ್ಯದ ಬೆದರಿಕೆ ಎಂಬ ಕಲ್ಪನೆಯನ್ನು ಪ್ರಚಾರ ಮಾಡಿ ಜನರ ಮನಸ್ಸಿನಲ್ಲಿ ಭಯ ಮೂಡಿಸಲು ಪಾಶ್ಚಿಮಾತ್ಯರು ಪ್ರಯತ್ನಿಸುತ್ತಿದ್ದಾರೆ. ಪಾಶ್ಚಿಮಾತ್ಯರು ನಿರಂತರ ಪ್ರಚೋದನೆ ಮಾಡಿದರೂ ರಶ್ಯವು ಇದುವರೆಗೆ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಿಲ್ಲ ಎಂದರು.
ರಶ್ಯದಲ್ಲಿ ಬಂಧನದಲ್ಲಿರುವ ವಾಲ್ಸ್ಟ್ರೀಟ್ ಜರ್ನಲ್ ವರದಿಗಾರ ಇವಾನ್ ಗೆರ್ಷ್ಕೋವಿಚ್ರನ್ನು ಬಿಡುಗಡೆಗೊಳಿಸುವ ಒಪ್ಪಂದ ಸಾಧ್ಯವಿದೆ. ಆದರೆ ಅದಕ್ಕೂ ಮುನ್ನ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ' ಎಂದು ಇದೇ ವೇಳೆ ಪುಟಿನ್ ಹೇಳಿದ್ದಾರೆ. ಬೇಹುಗಾರಿಕೆ ಆರೋಪದಲ್ಲಿ ಕಳೆದ ವರ್ಷದ ಮಾರ್ಚ್ನಲ್ಲಿ ಇವಾನ್ ಗೆರ್ಷ್ಕೋವಿಚ್ರನ್ನು ರಶ್ಯದ ಅಧಿಕಾರಿಗಳು ಬಂಧಿಸಿದ್ದರು.