ಶ್ರೀಲಂಕಾ: ಆಸ್ಪತ್ರೆ ಕರ್ತವ್ಯಕ್ಕೆ ಯೋಧರ ನಿಯೋಜನೆ

Update: 2024-01-17 14:57 GMT

Photo : ndtv

ಕೊಲಂಬೊ: ಭತ್ಯೆಗೆ ಆಗ್ರಹಿಸಿ ಆರೋಗ್ಯ ಕಾರ್ಯಕರ್ತರು ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಿರುವುದರಿಂದ ಶ್ರೀಲಂಕಾದಲ್ಲಿ ಆಸ್ಪತ್ರೆಯ ಕರ್ತವ್ಯಕ್ಕೆ ಯೋಧರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಆಸ್ಪತ್ರೆಯ ನಿರ್ದೇಶಕರ ಕೋರಿಕೆಯ ಮೇರೆಗೆ ದೇಶದ 25 ಆಸ್ಪತ್ರೆಗಳಲ್ಲಿ 615 ಯೋಧರು ಹಾಗೂ 19 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್‍ಗೆ ರೋಗಿಗಳ ಸ್ಥಳಾಂತರ, ಆಸ್ಪತ್ರೆಯೊಳಗೆ ರೋಗಿಗಳನ್ನು ಸ್ಥಳಾಂತರಿಸುವುದು, ದಾಖಲೆ ನಿರ್ವಹಣೆ ಮುಂತಾದ ವೈದ್ಯಕೀಯೇತರ ಕೆಲಸಗಳನ್ನು ಯೋಧರು ನಿರ್ವಹಿಸುತ್ತಾರೆ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ರಸಿಕ ಕುಮಾರರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಅತ್ಯಂತ ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಜೀವನ ವೆಚ್ಚ ಏರುತ್ತಿದ್ದು ಸರಕಾರ ತೆರಿಗೆಯನ್ನು ಹೆಚ್ಚಿಸಿದೆ ಮತ್ತು ಸರಕಾರಿ ನೌಕರರ ಸವಲತ್ತುಗಳನ್ನು ಸೀಮಿತಗೊಳಿಸಿದೆ. ವೈದ್ಯರಿಗೆ 70,000 ರೂ. ಮಾಸಿಕ ಪ್ರಯಾಣ ಭತ್ಯೆಯನ್ನು ನೀಡುವ ಪ್ರಸ್ತಾವನೆಗೆ ಶ್ರೀಲಂಕಾ ಸರಕಾರ ಈ ವಾರ ಅನುಮೋದನೆ ನೀಡಿದೆ. ಆದರೆ ತಮಗೂ ಪ್ರಯಾಣ ಭತ್ಯೆ ಒದಗಿಸಬೇಕೆಂಬುದು ಇತರ ಆರೋಗ್ಯ ಸಿಬಂದಿಗಳ ಆಗ್ರಹವಾಗಿದೆ.` ಆರೋಗ್ಯಸೇವೆಯ ಕಾರ್ಯಕರ್ತರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಆರೋಗ್ಯ ಸೇವೆಯಲ್ಲಿ ವೈದ್ಯರಷ್ಟೇ ಇತರ ಸಿಬಂದಿಗಳೂ ಮುಖ್ಯವಾಗಿದ್ದಾರೆ' ಎಂದು ಆರೋಗ್ಯ ಸೇವಾ ಸಿಬಂದಿಗಳ ಒಕ್ಕೂಟದ ಸಂಚಾಲಕ ರವಿ ಕುಮುದೇಶ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News