ಅಮೆರಿಕ ಜತೆಗಿನ ಮಿಲಿಟರಿ ಒಪ್ಪಂದ ರದ್ದುಗೊಳಿಸಿದ ನೈಜರ್
ನಿಯಾಮೆ : ಅಮೆರಿಕದ ಜತೆಗಿನ ತನ್ನ ಮಿಲಿಟರಿ ಸಹಕಾರ ಒಪ್ಪಂದವನ್ನು ತಕ್ಷಣದಿಂದ ಅನ್ವಯಿಸುವಂತೆ ರದ್ದುಗೊಳಿಸಲಾಗಿದೆ ಎಂದು ನೈಜರ್ ದೇಶದ ಸರಕಾರ ಘೋಷಿಸಿದೆ.
ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ವಶಪಡಿಸಿಕೊಂಡಿರುವ ಸೇನಾಡಳಿತ ರಶ್ಯಕ್ಕೆ ನಿಕಟವಾಗುತ್ತಿದೆ. ನೈಜರ್ ಜತೆಗಿನ ಮಿಲಿಟರಿ ಒಪ್ಪಂದವನ್ನು ನವೀಕರಿಸಲು ಅಮೆರಿಕದ ಉನ್ನತ ಅಧಿಕಾರಿಗಳ ನಿಯೋಗ ನೈಜರ್ ಗೆ 3 ದಿನಗಳ ಭೇಟಿ ನೀಡಿ ಮಾತುಕತೆ ನಡೆಸಿ ವಾಪಸಾಗಿರುವಂತೆಯೇ ಸೇನಾಡಳಿತದ ಈ ಘೋಷಣೆ ಹೊರಬಿದ್ದಿದೆ. ಅಮೆರಿಕದ ನಿಯೋಗ ರಾಜತಾಂತ್ರಿಕ ಶಿಷ್ಟಾಚಾರವನ್ನು ಪಾಲಿಸಿಲ್ಲ. ನಿಯೋಗದ ಸ್ವರೂಪ ಮತ್ತು ನೈಜರ್ ಗೆ ಆಗಮಿಸುವ ದಿನಾಂಕದ ಬಗ್ಗೆ ಅಥವಾ ಮಾತುಕತೆಯ ಅಜೆಂಡಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಸೇನಾಡಳಿತ ಹೇಳಿದೆ.
ನಮ್ಮ ದೇಶದ ನೆಲದಲ್ಲಿ ಅಮೆರಿಕದ ರಕ್ಷಣಾ ಇಲಾಖೆಯ ನಾಗರಿಕ ಸಿಬಂದಿ ಮತ್ತು ಮಿಲಿಟರಿ ಸಿಬಂದಿಯ ಉಪಸ್ಥಿತಿಗೆ ಅವಕಾಶ ನೀಡುವ ಒಪ್ಪಂದವನ್ನು ತಕ್ಷಣದಿಂದಲೇ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ನೈಜರ್ ನ ಸೇನಾಡಳಿತದ ವಕ್ತಾರರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷದ ಜುಲೈಯಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಫ್ರಾನ್ಸ್ ಹಾಗೂ ಇತರ ಯುರೋಪಿಯನ್ ಪಡೆಗಳನ್ನು ದೇಶದಿಂದ ಹೊರಗೆ ಕಳುಹಿಸಿದ್ದ ನೈಜರ್, ರಶ್ಯಕ್ಕೆ ನಿಕಟವಾಗುತ್ತಿದೆ.