ನೇಪಾಳ | ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷ ವಿಭಜನೆ

Update: 2024-05-07 15:23 GMT

ಕಠ್ಮಂಡು: ನೇಪಾಳದಲ್ಲಿ ಅಧಿಕಾರದಲ್ಲಿರುವ ಮೈತ್ರಿಕೂಟ ಸರಕಾರದ ಪ್ರಮುಖ ಮಿತ್ರಪಕ್ಷವಾಗಿರುವ ಜನತಾ ಸಮಾಜವಾದಿ ಪಾರ್ಟಿ-ನೇಪಾಳ(ಜೆಎಸ್‍ಪಿ-ಎನ್)ದ ಸಂಸದರು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದು ಹೊಸ ಪಕ್ಷವನ್ನು ರಚಿಸಿರುವುದಾಗಿ ವರದಿಯಾಗಿದೆ.

ಜೆಎಸ್‍ಪಿ-ಎನ್ ಪಕ್ಷದ ಅಧ್ಯಕ್ಷ, ಉಪಪ್ರಧಾನಿ ಉಪೇಂದ್ರ ಯಾದವ್ ವಿದೇಶಕ್ಕೆ ಪ್ರವಾಸ ತೆರಳಿರುವ ಸಂದರ್ಭ ಈ ಬೆಳವಣಿಗೆ ನಡೆದಿದ್ದು ಇದಕ್ಕೆ ಮೈತ್ರಿ ಸರಕಾರದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ತೆರೆಮರೆಯಲ್ಲಿ ಬೆಂಬಲ ನೀಡಿದ್ದಾರೆ. ಯಾದವ್ ವಿರೋಧ ಪಕ್ಷದೊಂದಿಗೆ ಕೈಜೋಡಿಸಿ `ಪ್ರಚಂಡ' ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು.

ಉಪೇಂದ್ರ ಯಾದವ್ ಅವರ ಪ್ರಭಾವವನ್ನು ಹತ್ತಿಕ್ಕುವುದು ಇದರ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪಕ್ಷದ ಸಂಸದ ಅಶೋಕ್ ರಾಯ್ ನೇತೃತ್ವದಲ್ಲಿ 7 ಸಂಸದರು ಹಾಗೂ 29 ಕೇಂದ್ರೀಯ ಸಮಿತಿ ಸದಸ್ಯರು ಹೊಸ ಪಕ್ಷ `ಜನತಾ ಸಮಾಜವಾದಿ ಪಕ್ಷ'ದ ನೋಂದಣಿಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಜೆಎಸ್‍ಪಿ-ಎನ್ ಸಂಸತ್‍ನಲ್ಲಿ 12 ಸದಸ್ಯರನ್ನು ಹೊಂದಿದೆ.

ಅಶೋಕ್ ರಾಯ್ ನೇತೃತ್ವದ ಜೆಎಸ್‍ಪಿಯನ್ನು ಹೊಸ ರಾಜಕೀಯ ಪಕ್ಷವೆಂದು ಚುನಾವಣಾ ಆಯೋಗ ಮಾನ್ಯ ಮಾಡಿದೆ. ಈ ಹೊಸ ರಾಜಕೀಯ ಬೆಳವಣಿಗೆಯ ಬಳಿಕ `ಪ್ರಚಂಡ' ನೇತೃತ್ವದ ಸಿಪಿಎನ್(ಮಾವೋವಾದಿ) ಪಕ್ಷ ಸಂಸತ್‍ನಲ್ಲಿ ಅಲ್ಪ ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೆಎಸ್‍ಪಿ-ಎನ್ ವಿಭಜನೆಗೂ ಮುನ್ನ 275 ಸದಸ್ಯಬಲದ ಸಂಸತ್‍ನಲ್ಲಿ ಆಡಳಿತ ಮೈತ್ರಿಕೂಟ ಸಿಪಿಎನ್- ಯುಎಮ್‍ಎಲ್ 79 ಸ್ಥಾನ(ಸ್ಪೀಕರ್ ಹಾಗೂ ಉಚ್ಛಾಟಿತ ಸಂಸದ ಸೇರಿ), ಸಿಪಿಎನ್(ಮಾವೋವಾದಿ) 32, ರಾಷ್ಟ್ರೀಯ ಸ್ವತಂತ್ರ ಪಾರ್ಟಿ 21, ಜೆಎಸ್‍ಪಿ-ಎನ್ 12, ಸಿಪಿಎನ್(ಯುನಿಫೈಡ್ ಸೋಷಿಯಲಿಸ್ಟ್) 10 ಸ್ಥಾನ ಸೇರಿದಂತೆ 154 ಸ್ಥಾನಗಳನ್ನು ಹೊಂದಿತ್ತು. ಬಹುಮತಕ್ಕೆ 138 ಸ್ಥಾನಗಳ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News