ಯುದ್ಧ ಉನ್ಮಾದ ಬೇಡ: ಪುಟಿನ್ ಗೆ ಟ್ರಂಪ್ ಸಲಹೆ
ವಾಷಿಂಗ್ಟನ್: ಉಕ್ರೇನ್ ಯುದ್ಧವನ್ನು ಮತ್ತಷ್ಟು ಉಲ್ಬಣಗೊಳಿಸಬಾರದು ಎಂದು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ನಾದಿಮಿರ್ ಪುಟಿನ್ ಅವರಿಗೆ ಸಲಹೆ ಮಾಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಕಮಲಾ ಹ್ಯಾರಿಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್ ನಿಂದ ರಷ್ಯಾ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸುವ ವೇಳೆ ಟ್ರಂಪ್ ಈ ತಾಕೀತು ಮಾಡಿದರು ಎಂದು ತಿಳಿದು ಬಂದಿದೆ.
ಯೂರೋಪ್ ನಲ್ಲಿ ಅಮೆರಿಕದ ಸೇನೆ ದೊಡ್ಡ ಪ್ರಮಾಣದಲ್ಲಿ ಇರುವುದನ್ನು ಪುಟಿನ್ ಗೆ ನೆನಪಿಸಿದ ಟ್ರಂಪ್, ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಚರ್ಚೆ ನಡೆಸುವ ಇಂಗಿತ ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಅಗತ್ಯತೆಯನ್ನು ಟ್ರಂಪ್ ಪ್ರತಿಪಾದಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾದ ಅನಾಮಧೇಯ ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ಮಾಸ್ಕೊ ಜತೆ ಭವಿಷ್ಯದಲ್ಲಿ ತಾವು ಚರ್ಚೆ ನಡೆಸುವುದಾಗಿ ಟ್ರಂಪ್ ಸ್ಪಷ್ಟಪಡಿಸಿದರು.
ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಝೆಲೆನ್ಸ್ಕಿ ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎಲಾನ್ ಮಸ್ಕ್ ಜತೆಗೆ ಮಾತುಕತೆ ನಡೆಸಿದ ಬಳಿಕ ಟ್ರಂಪ್, ಪುಟಿನ್ ಜತೆಗೂ ಸಂಭಾಷಣೆ ನಡೆಸಿದರು. ಟ್ರಂಪ್ ಜತೆಗಿನ ಮಾತುಕತೆಯನ್ನು ಝೆಲೆನ್ಸ್ಕಿ "ಅದ್ಭುತ" ಎಂದು ಬಣ್ಣಿಸಿದ್ದು, ಹೊಸ ಆಡಳಿತ ವ್ಯವಸ್ಥೆ ಜತೆ ಮಾತುಕತೆ ನಡೆಸಲು ಮತ್ತು ಸಹಕರಿಸಲು ಸಿದ್ಧ ಎಂದು ಹೇಳಿದ್ದಾರೆ.
ರಷ್ಯಾ- ಉಕ್ರೇನ್ ಸಂಘರ್ಷ ಕಳೆದ ಎರಡೂವರೆ ವರ್ಷಗಳಿಂದ ಮುಂದುವರಿದಿದ್ದು, ಪ್ರಮುಖ ಜಾಗತಿಕ ಭೌಗೋಳಿಕ-ರಾಜಕೀಯ ಸಮಸ್ಯೆ ಎನಿಸಿಕೊಂಡಿದೆ.