ವಾಯು ಮಾಲಿನ್ಯ: ಪಾಕಿಸ್ತಾನದ ಕೆಲವು ನಗರಗಳಲ್ಲಿ ಬಲವಂತದ ಲಾಕ್ ಡೌನ್

Update: 2024-11-09 10:38 GMT
PC ; ANI 

ಮುಲ್ತಾನ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ವಾಯು ಮಾಲಿನ್ಯ ತೀವ್ರ ಸ್ವರೂಪದಲ್ಲಿ ಏರಿಕೆಯಾಗಿದ್ದು, ಕೆಲವು ನಗರಗಳಲ್ಲಿ ಬಲವಂತದ ಲಾಕ್ ಡೌನ್ ಹೇರಲಾಗಿದೆ ಎಂದು ʼಡಾನ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಂಜಾಬ್ ಪ್ರಾಂತ್ಯದ ಪ್ರಮುಖ ನಗರವಾದ ಮುಲ್ತಾನ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 2000ಕ್ಕೆ ಕುಸಿದಿದ್ದು, ನಗರದಾದ್ಯಂತ ಹೊಂಜು ತುಂಬಿದ ವಾತಾವರಣ ಕಂಡು ಬಂದಿದೆ.

ಈ ಸಂಬಂಧ ಪಂಜಾಬ್ ರಾಜ್ಯ ಸರಕಾರವು ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆ.

ಪಂಜಾಬ್ ನ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ತೀವ್ರ ಹದಗೆಟ್ಟಿರುವುದರಿಂದ, ರಾಜ್ಯ ಸರಕಾರವು ಈ ನಗರಗಳಲ್ಲಿನ ಉದ್ಯಾನವನಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ನವೆಂಬರ್ 17ರವರೆಗೆ ಬಂದ್ ಮಾಡಿದೆ.

ಸ್ವಿಝರ್ ಲೆಂಡ್ ನ ವಾಯು ಗುಣಮಟ್ಟ ನಿಗಾ ಸಂಸ್ಥೆ ಐಕ್ಯೂಏರ್ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅತಿ ದೊಡ್ಡ ನಗರವಾದ ಮುಲ್ತಾನ್ ನಲ್ಲಿ ಇಂದು ಬೆಳಗ್ಗೆ 8ರಿಂದ 9 ಗಂಟೆಯ ನಡುವೆ ವಾಯು ಗುಣಮಟ್ಟ ಸೂಚ್ಯಂಕವು 2,135ಕ್ಕ ಕುಸಿದಿದೆ ಎಂದು ಡಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಲ್ತಾನ್ ನ ನೆರೆಹೊರೆಯ ಜಿಲ್ಲೆಗಳಾದ ಬಹಾವಲ್ ಪುರ್, ಮುಝಾಫ್ಫರ್ ಗಢ್ ಹಾಗೂ ಖಾನೇವಾಲ್ ನಲ್ಲೂ ಕೂಡಾ ಹೊಂಜಿನ ಪರಿಸ್ಥಿತಿ ಮುಲ್ತಾನ್ ನಗರದಲ್ಲಿರುವಂತೆಯೇ ಇದೆ. ಇದರಿಂದ ರಸ್ತೆಗಳಲ್ಲಿ ಗೋಚರತೆಯ ಪ್ರಮಾಣ ಕ್ಷೀಣಿಸಿದೆ. ಅಪಾಯಕಾರಿ ವಾಯು ಗುಣಮಟ್ಟದ ಕಾರಣಕ್ಕೆ ಮುಲ್ತಾನ್ ನಗರದ ಬೃಹತ್ ವೈದ್ಯಕೀಯ ಸೌಲಭ್ಯವಾದ ನಿಶ್ತಾರ್ ಆಸ್ಪತ್ರೆಯಲ್ಲಿನ ಹೊರ ರೋಗಿ ವಿಭಾಗ ಹಾಗೂ ತುರ್ತು ವಿಭಾಗಗಳಲ್ಲಿ ರಾಜ್ಯ ಸರಕಾರವು ಎರಡು ಹೊಂಜು ಕೌಂಟರ್ ಗಳನ್ನು ಸ್ಥಾಪಿಸಿದೆ.

ಮುಲ್ತಾನ್ ನ ಜಿಲ್ಲಾಧಿಕಾರಿಯಾದ ವಸೀಂ ಹಮೀದ್ ಸಿಂಧು ಶುಕ್ರವಾರ ನಗರದಲ್ಲಿ ಸ್ಮಾರ್ಟ್ ಲಾಕ್ ಡೌನ್ ಹೇರಿದ್ದಾರೆ. ಇದರ ಪ್ರಕಾರ, ರಾತ್ರಿ ಎಂಟು ಗಂಟೆಯ ಒಳಗೆ ಮಾರುಕಟ್ಟೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಹೊಗೆ ಉಗುಳುವ ವಾಹನಗಳ ಮೇಲೆ ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದರೊಂದಿಗೆ, ಕೂಳೆ ಹಾಗೂ ತ್ಯಾಜ್ಯ ಸುಡುವಿಕೆ ಮೇಲೆ ದಾಳಿ ನಡೆಸುವಂತೆ ಸೂಚಿಸಿರುವ ಜಿಲ್ಲಾಡಳಿತ, ಝಿಗ್ ಝ್ಯಾಗ್ ತಂತ್ರಜ್ಞಾನ ಅಳವಡಿಸಿಕೊಳ್ಳದ ಇಟ್ಟಿಗೆ ಭಟ್ಟಿಗಳ ಮೇಲೂ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಈ ನಡುವೆ, ರಾತ್ರಿ 12 ಗಂಟೆ ವೇಳೆಗೆ ಲಾಹೋರ್ ನ ವಾಯು ಗುಣಮಟ್ಟ ಸೂಚ್ಯಂಕವು 1,000ಕ್ಕಿಂತ ಹೆಚ್ಚಾಗಿದ್ದು, ವಿಶ್ವದಲ್ಲೇ ಅತ್ಯಂತ ಮಾಲಿನ್ಯ ನಗರವಾಗಿ ಹೊರ ಹೊಮ್ಮಿದೆ.

ಇದಲ್ಲದೆ ಪಂಜಾಬ್‍ ಪ್ರಾಂತ್ಯದಲ್ಲಿನ 18 ಜಿಲ್ಲೆಗಳಲ್ಲಿರುವ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News