ಎಸ್‌ಸಿಓ ಸಮಾವೇಶದಲ್ಲಿ ಭಾಗವಹಿಸಲು ಮೋದಿಗೆ ಪಾಕ್ ಆಹ್ವಾನ

Update: 2024-08-29 16:36 GMT

 ನರೇಂದ್ರ ಮೋದಿ | PTI 

ಇಸ್ಲಾಮಾಬಾದ್ : ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ)ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರುವಾರ ಆಹ್ವಾನಿಸಿದೆ.

ಎಸ್‌ಸಿಓ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಇಸ್ಲಾಮಾಬಾದ್, ವಿವಿಧ ದೇಶಗಳ ವರಿಷ್ಠರಿಗೆ ಆಹ್ವಾನಪತ್ರಿಕೆಗಳನ್ನು ಕಳುಹಿಸಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಝ್ ಝಹ್ರಾ ಬಲೋಚ್ ಹೇಳಿದರು.

ಇಸ್ಲಾಮಾಬಾದ್‌ನಲ್ಲಿ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, “ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನವನ್ನು ಕಳುಹಿಸಲಾಗಿದೆ. ಈಗಾಗಲೇ ಕೆಲವು ದೇಶಗಳು ಸಮಾವೇಶದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿವೆ ಎಂದರು. ಸಮಾವೇಶದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಾತರಿಪಡಿಸಿದ ದೇಶಗಳ ಹೆಸರನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’’ ಎಂದು ಬಲೋಚ್ ಹೇಳಿದ್ದಾರೆ.

ಇಸ್ಲಾಮಬಾದ್‌ನಲ್ಲಿ ಅಕ್ಟೋಬರ್ 15-16ರಂದು ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ವರಿಷ್ಠ ರಸಭೆ ನಡೆಯಲಿದ್ದು, ಪಾಕ್ ಆತಿಥ್ಯ ವಹಿಸಲಿದೆ. ಸಮಾವೇಶದಲ್ಲಿ ಹಣಕಾಸು, ಆರ್ಥಿತೆ, ಸಾಮಾಜಿ-ಸಾಂಸ್ಕೃತಿ ಹಾಗೂ ಮಾನವೀಯ ಸಹಕಾರಗಳ ಕುರಿತು ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆಗಳು ನಡೆಯಲಿದೆ.

ಉಭಯದೇಶಗಳ ಬಾಂಧವ್ಯಗಳಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಆಹ್ವಾನವನ್ನು ಸ್ವೀಕರಿಸುವ ಸಾಧ್ಯತೆಯಿಲ್ಲವೆಂದು ಅಂತರರಾಷ್ಟ್ರೀಯ ವಿಶ್ಲೇಷಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News