ಡಿಫ್ತೀರಿಯಾ ನಿರೋಧಕ ಲಸಿಕೆ ಕೊರತೆ : ಪಾಕಿಸ್ತಾನದಲ್ಲಿ 100ಕ್ಕೂ ಅಧಿಕ ಮಕ್ಕಳ ಮೃತ್ಯು

Update: 2024-10-13 16:24 GMT

image: PTI

ಇಸ್ಲಾಮಾಬಾದ್ : ಡಿಫ್ತೀರಿಯಾ (ಗಂಟಲು ಮಾರಿ) ಸಾಂಕ್ರಾಮಿಕ ರೋಗದ ವಿರುದ್ಧದ `ಡಿಎಟಿ' ಲಸಿಕೆಯ ಕೊರತೆಯಿಂದ ಪಾಕಿಸ್ತಾನದ ಕರಾಚಿಯಲ್ಲಿ 100ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೆಖಿಸಿ `ಜಿಯೊ ನ್ಯೂಸ್' ವರದಿ ಮಾಡಿದೆ.

ಗಂಟಲು ಮಾರಿ ಸಾಂಕ್ರಾಮಿಕ ರೋಗದ ವಿರುದ್ಧ ಬಳಸುವ `ಡಿಎಟಿ' ಲಸಿಕೆಯು ಕರಾಚಿ ಸೇರಿದಂತೆ ಸಿಂಧ್ ಪ್ರಾಂತದಾದ್ಯಂತ ಲಭ್ಯವಿಲ್ಲ. ಕಳೆದ ವರ್ಷ ಸಿಂಧ್ ನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ 140 ಪ್ರಕರಣಗಳು (ರೋಗಿಗಳು) ದಾಖಲಾಗಿದ್ದು ಇದರಲ್ಲಿ 52 ಮಂದಿ ಬದುಕುಳಿಯಲಿಲ್ಲ ಎಂದು ಮೂಲಗಳು ಹೇಳಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಡಿಫ್ತಿರಿಯಾವು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು ಶ್ವಾಸಕೋಶ ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯ ಮತ್ತು ನರಗಳಿಗೆ ಹಾನಿ ಮಾಡುವ ಟಾಕ್ಸಿನ್(ವಿಷಕಾರಿ ಅಂಶ)ವನ್ನು ಉತ್ಪಾದಿಸುತ್ತದೆ. ಈ ರೋಗವನ್ನು ಲಸಿಕೆಯಿಂದ ತಡೆಯಬಹುದಾದರೂ, ಪ್ರತಿರೋಧ ಶಕ್ತಿ ಹೆಚ್ಚಲು ಲಸಿಕೆಗಳ ಹಲವು ಡೋಸ್ ಗಳ ಅಗತ್ಯವಿದೆ. ಆದ್ದರಿಂದ ಸೂಕ್ತ ಪ್ರಮಾಣದ ಡೋಸ್ ಪಡೆಯದವರು ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.

ಪಾಕಿಸ್ತಾನದಲ್ಲಿ ಲಸಿಕೆಯ ಕೊರತೆ ಇರುವ ಬಗ್ಗೆ ತಜ್ಞರು ಎಚ್ಚಸುತ್ತಲೇ ಬಂದಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸಿಲ್ಲ ಎಂದು ವರದಿ ಹೇಳಿದೆ.

ಇದು ಪ್ರಾಥಮಿಕವಾಗಿ ಗಂಟಲು ಮತ್ತು ಮೇಲ್ಭಾಗದ ಶ್ವಾಸೇಂದ್ರಿಯ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಡಿಫ್ತೀರಿಯಾದಿಂದ ಗಂಟಲಿನಲ್ಲಿ ಬೂದು-ಬಿಳಿ ಪೊರೆ ರಚನೆಯಾಗುವುದರಿಂದ ಉಸಿರಾಟಕ್ಕೆ ಮತ್ತು ನುಂಗಲು ತೊಂದರೆ ಉಂಟು ಮಾಡುತ್ತದೆ. ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಂಡ 2ರಿಂದ 5 ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ನೋಯುತ್ತಿರುವ ಗಂಟಲು, ಜ್ವರ,ಊದಿಕೊಂಡ ಕತ್ತಿನ ಗ್ರಂಥಿಗಳು ಮತ್ತು ನಿಶ್ಯಕ್ತಿ ರೋಗದ ಮುಖ್ಯ ಲಕ್ಷಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News