ಲೆಬನಾನ್ ನಿಂದ ಶಾಂತಿಪಾಲಕರ ತೆರವಿಗೆ ಇಸ್ರೇಲ್ ಆಗ್ರಹ
ಟೆಲ್‍ಅವೀವ್ : ದಕ್ಷಿಣ ಲೆಬನಾನ್‍ನಲ್ಲಿ ನಿಯೋಜನೆಗೊಂಡಿರುವ ವಿಶ್ವಸಂಸ್ಥೆ ಶಾಂತಿಪಾಲಕರನ್ನು ತಕ್ಷಣವೇ ಹಾನಿಯ ಮಾರ್ಗದಿಂದ ತೆರವುಗೊಳಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.
ಇಸ್ರೇಲ್ ದಾಳಿಯಲ್ಲಿ ಶಾಂತಿಪಾಲನಾ ಪಡೆಯ ಐವರು ಯೋಧರು ಗಾಯಗೊಂಡರೂ ದಕ್ಷಿಣ ಲೆಬನಾನ್‍ನಲ್ಲಿನ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ಯುಎನ್‍ಐಎಫ್‍ಐಎಲ್ ನಿರಾಕರಿಸಿತ್ತು.
ರವಿವಾರ ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು ` ಶಾಂತಿಪಾಲನಾ ಪಡೆಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ತಕ್ಷಣವೇ ವಾಪಾಸು ಕರೆಸಿಕೊಳ್ಳಬೇಕು. ಈ ಕುರಿತು ಈಗಾಗಲೇ ನಾವು ಹಲವು ಬಾರಿ ಯುಎನ್‍ಐಎಫ್‍ಐಎಲ್ ಅನ್ನು ಕೋರಿದ್ದರೂ ಅವರು ನಿರಾಕರಿಸಿದ್ದು ಇದು ಹಿಜ್ಬುಲ್ಲಾ ಗುಂಪಿನವರಿಗೆ ಮಾನವ ಗುರಾಣಿಯನ್ನು ಒದಗಿಸಿದಂತಾಗಿದೆ. ಶಾಂತಿಪಾಲನಾ ಯೋಧರನ್ನು ಹಿಜ್ಬುಲ್ಲಾ ಒತ್ತೆಯಾಳಾಗಿ ಇರಿಸಿಕೊಳ್ಳುವ ಅಪಾಯವನ್ನೂ ತಳ್ಳಿಹಾಕಲಾಗದು. ಶಾಂತಿಪಾಲನಾ ಯೋಧರು ಗಾಯಗೊಂಡಿರುವುದಕ್ಕೆ ನಾವು ವಿಷಾದಿಸುತ್ತೇವೆ. ನಮ್ಮ ಕಾರ್ಯಾಚರಣೆಯ ಸಂದರ್ಭ ಈ ರೀತಿ ಗಾಯಗೊಳ್ಳುವುದನ್ನು ತಡೆಯಲು ಗರಿಷ್ಟ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಇದಕ್ಕೆ ಸರಳ ದಾರಿಯೆಂದರೆ ಶಾಂತಿಪಾಲನಾ ಪಡೆಯನ್ನು ಲೆಬನಾನ್‍ನಿಂದ ತೆರವುಗೊಳಿಸುವುದು' ಎಂದು ನೆತನ್ಯಾಹು ಹೇಳಿದ್ದಾರೆ.