ಗಾಝಾ ಯುದ್ಧ ವರದಿ ಮಾಡಿದ ಫೆಲೆಸ್ತೀನ್ ಪತ್ರಕರ್ತರಿಗೆ ಪ್ರತಿಷ್ಠಿತ ʼಪ್ರೆಸ್ ಫೌಂಡೇಷನ್ʼ ಪ್ರಶಸ್ತಿ
ಗಾಜಾ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ನಾಟಕೀಯ ಸನ್ನಿವೇಶಗಳನ್ನು ವರದಿ ಮಾಡಿದ ಫೆಲೆಸ್ತೀನ್ ಪತ್ರಕರ್ತರು ಯುನೆಸ್ಕೊ ನೀಡುವ ಪ್ರತಿಷ್ಠಿತ ಗ್ಯುಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮ ವೃತ್ತಿಪರರನ್ನೊಳಗೊಂಡ ತೀರ್ಪುಗಾರರ ತಂಡದ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗಿದೆ. ಚಿಲಿಯ ಸಾಂಟಿಗೊದಲ್ಲಿ ಮೇ 2ರಂದು ನಡೆದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
"ಕತ್ತಲು ಮತ್ತು ನಿರಾಶಾದಾಯಕ ವಾತಾವರಣದಲ್ಲಿ ಫೆಲೆಸ್ತೀನಿ ಪತ್ರಕರ್ತರ ನಿಷ್ಠೆ ಮತ್ತು ಬದ್ಧತೆಯನ್ನು ಗೌರವಿಸುವ ಮೂಲಕ ಪ್ರಬಲ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ಅವರ ಅಭಿವ್ಯಕ್ತಿ ಸ್ವಾತಂತ್ರದ ಬದ್ಧತೆ ಮತ್ತು ಸಾಹಸಕ್ಕೆ ನಾವು ಚಿರಋಣಿಗಳು" ಎಂದು ತೀರ್ಪುರಾರರ ತಂಡದ ಮುಖ್ಯಸ್ಥ ಮೌರಿಸಿಯೊ ವೀಬೆಲ್ ಹೇಳಿದ್ದಾರೆ.
ಸಂಘರ್ಷಪೀಡಿತ ಪ್ರದೇಶಗಳಿಂದ ವರದಿ ಮಾಡುವ ಪತ್ರಕರ್ತರಿಗೆ ಯುನೆಸ್ಕೊ ನೆರವು ನೀಡುತ್ತಿದೆ. ಗಾಝಾದಲ್ಲಿ ಪತ್ರಕರ್ತರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದು, ಸುರಕ್ಷಿತ ಕಾರ್ಯತಾಣಗಳನ್ನು ವ್ಯವಸ್ಥೆ ಮಾಡಿಕೊಟ್ಟಿದೆ. ಜತೆಗೆ ಉಕ್ರೇನ್ ಹಾಗೂ ಸೂಡಾಲ್‍ನಲ್ಲಿ ತುರ್ತು ಅನುದಾನವನ್ನೂ ನೀಡಿದೆ. ಸುರಕ್ಷಾ ಸಾಧನಗಳು ಮತ್ತು ತರಬೇತಿಯನ್ನು ಹೈಟಿಯಲ್ಲಿ ಪತ್ರಕರ್ತರಿಗೆ ನೀಡಿದ್ದು, ಅಪ್ಘಾನಿಸ್ತಾನದಲ್ಲಿ ಸ್ವತಂತ್ರ್ಯ ಮಾಧ್ಯಮಗಳನ್ನು ಬೆಂಬಲಿಸುತ್ತಿದೆ.