ಪುಟಿನ್‍ರನ್ನು ಶಿಕ್ಷಿಸದೆ ಬಿಡಬಾರದು: ನವಾಲ್ನಿ ಪತ್ನಿ ಆಗ್ರಹ
ಬರ್ಲಿನ್: ಅಲೆಕ್ಸಿ ನವಾಲ್ನಿಯ ಸಾವು ದೃಢಪಟ್ಟರೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅವರ ಆಪ್ತವರ್ಗದವರನ್ನು ಶಿಕ್ಷೆಯಿಂದ ನುಣುಚಿಕೊಳ್ಳಲು ಬಿಡಬಾರದು ಎಂದು ನವಾಲ್ನಿಯ ಪತ್ನಿ ಯೂಲಿಯಾ ನವಹ್ನಾಯಾ ಆಗ್ರಹಿಸಿದ್ದಾರೆ.
ಜರ್ಮನಿಯ ಮ್ಯೂನಿಚ್‍ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಯೂಲಿಯಾ `ರಶ್ಯದಲ್ಲಿನ ಭಯಾನಕ ಆಡಳಿತದ ವಿರುದ್ಧ ಹೋರಾಡಲು ಅಂತರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ಒತ್ತಾಯಿಸಿದರು. `ಪುಟಿನ್ ಮತ್ತವರ ಸಿಬ್ಬಂದಿ ವರ್ಗದವರು ನಮ್ಮ ದೇಶ, ನಮ್ಮ ಕುಟುಂಬ, ನನ್ನ ಪತಿಯ ವಿರುದ್ಧ ಮಾಡಿರುವ ಅನ್ಯಾಯಕ್ಕಾಗಿ ಅವರೆಲ್ಲರನ್ನೂ ಶಿಕ್ಷಿಸದೆ ಬಿಡಬಾರದು. ಇಷ್ಟೂ ವರ್ಷದಿಂದ ನಮ್ಮ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯಕ್ಕಾಗಿ ಪುಟಿನ್‍ರನ್ನು ವೈಯಕ್ತಿಕ ಹೊಣೆಯಾಗಿಸಬೇಕು' ಎಂದವರು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಮ್ಯೂನಿಚ್‍ನಲ್ಲಿ ಯೂಲಿಯಾರನ್ನು ಭೇಟಿಯಾಗಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ` ನವಾಲ್ನಿಯ ಸಾವಿಗೆ ರಶ್ಯ ಜವಾಬ್ದಾರಿಯಾಗಿದೆ' ಎಂದು ಪುನರುಚ್ಚರಿಸಿದ್ದರು. ಈ ಮಧ್ಯೆ, ತನ್ನ ಮಗನನ್ನು ಫೆಬ್ರವರಿ 12ರಂದು ಜೈಲಿನಲ್ಲಿ ಭೇಟಿಯಾದಾಗ ಆತ ಆರೋಗ್ಯವಾಗಿ ಖುಷಿಯಿಂದ ಇದ್ದ. ಮಗನ ಸಾವಿಗೆ ಯಾವ ಸಂತಾಪವನ್ನೂ ತಾನು ಬಯಸುವುದಿಲ್ಲ' ಎಂದು ನವಾಲ್ನಿಯ ತಾಯಿ ಲ್ಯುಡ್ಮಿಲಾ ನವಲ್ನಾಯಾ ಹೇಳಿದ್ದಾರೆ.