ಜಿ20 ಸಭೆಯಲ್ಲಿ ಪುಟಿನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಳ್ಳುವುದಿಲ್ಲ: ರಶ್ಯ
ಮಾಸ್ಕೊ: ಈ ವಾರಾಂತ್ಯದಲ್ಲಿ ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯನ್ನುದ್ದೇಶಿಸಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವ ಯೋಜನೆಯಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿ ಗುರುವಾರ ಹೇಳಿದೆ.
ಉಕ್ರೇನ್‍ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ರಶ್ಯ ಹಾಗೂ ಪಾಶ್ಚಿಮಾತ್ಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಉಕ್ರೇನ್‍ನಲ್ಲಿ ಯುದ್ಧಾಪರಾಧ ಎಸಗಿರುವ ಆರೋಪದಲ್ಲಿ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಜಾರಿಗೊಳಿಸಿದ ಬಳಿಕ ಅವರು ವಿದೇಶ ಪ್ರಯಾಣದಿಂದ ಹಿಂದೆ ಸರಿಯುತ್ತಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ರಶ್ಯ ನಿಯೋಗದ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ವಹಿಸಿದ್ದಾರೆ. ಶೃಂಗಸಭೆಯಲ್ಲಿ ಪುಟಿನ್ ಅವರ ಹೇಳಿಕೆಯ ವೀಡಿಯೊ ಪ್ರಸಾರವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಯ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ `ಈ ರೀತಿಯ ಯೋಜನೆಯಿಲ್ಲ. ಎಲ್ಲಾ ಕಾರ್ಯಗಳೂ ಸಚಿವ ಲಾವ್ರೋವ್ ನೇತೃತ್ವದಲ್ಲಿ ನಡೆಯಲಿದೆ' ಎಂದಿದ್ದಾರೆ.
ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನಲ್ಲಿ ನಡೆದಿದ್ದ ಬ್ರಿಕ್ಸ್ ಸಭೆಯಲ್ಲೂ ಪುಟಿನ್ ಗೈರುಹಾಜರಿಯಲ್ಲಿ ರಶ್ಯ ನಿಯೋಗದ ಅಧ್ಯಕ್ಷತೆಯನ್ನು ಲಾವ್ರೋವ್ ವಹಿಸಿದ್ದರು. ಈ ಸಭೆಯ ಸಮಾರೋಪದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ್ದ ಪುಟಿನ್, ಉಕ್ರೇನ್ ಸಂಘರ್ಷಕ್ಕೆ ಪಾಶ್ಚಿಮಾತ್ಯ ದೇಶಗಳೇ ಕಾರಣ ಎಂದು ದೂಷಿಸಿದ್ದರು.