ರಫಾ ಕಾರ್ಯಾಚರಣೆ ದುರಂತಕ್ಕೆ ಕಾರಣವಾಗಲಿದೆ: ಇಸ್ರೇಲ್‌ಗೆ ಅಮೆರಿಕ ಮಿತ್ರದೇಶಗಳ ಎಚ್ಚರಿಕೆ
ಸಿಡ್ನಿ: ದಕ್ಷಿಣ ಗಾಝಾದ ರಫಾ ನಗರದಲ್ಲಿ ಇಸ್ರೇಲ್ ಪದಾತಿ ದಳ ನಡೆಸುತ್ತಿರುವ ಕಾರ್ಯಾಚರಣೆ ದುರಂತದ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಝಿಲ್ಯಾಂಡ್ ದೇಶಗಳ ನಾಯಕರು ಗುರುವಾರ ಜಂಟಿ ಸುದ್ಧಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಫಾದಲ್ಲಿ ಇಸ್ರೇಲ್ನ ವೈಮಾನಿಕ ದಾಳಿಯ ಜತೆ ಪದಾತಿ ದಳ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಜಾಗತಿಕ ಸಮುದಾಯ ಆತಂಕ, ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಈ ಮೂರು ಕಾಮನ್ವೆಲ್ತ್ ದೇಶಗಳು `ಈ ಮಾರ್ಗದಲ್ಲಿ ಮುಂದುವರಿಯಬೇಡಿ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಆಗ್ರಹಿಸಿವೆ. `ಗಾಝಾದಲ್ಲಿ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷದಲ್ಲಿ ನೆಲೆ ಕಳೆದುಕೊಂಡಿರುವ ಸುಮಾರು 1.5 ದಶಲಕ್ಷ ಫೆಲಸ್ತೀನೀಯರು ರಫಾ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಪ್ರದೇಶದಲ್ಲಿ ನಮ್ಮ ಪ್ರಜೆಗಳೂ ಕುಟುಂಬ ಸಹಿತ ವಾಸಿಸುತ್ತಿದ್ದಾರೆ ಎಂದು ಅಮೆರಿಕದ ಮಿತ್ರದೇಶಗಳು ಹೇಳಿವೆ.
ವಿಸ್ತ್ರತ ಮಿಲಿಟರಿ ಕಾರ್ಯಾಚರಣೆ ವಿನಾಶಕಾರಿಯಾಗಿದೆ. ಇಲ್ಲಿರುವ ನಾಗರಿಕರಿಗೆ ಸುರಕ್ಷಿತವಾಗಿರಲು ಸ್ಥಳವೇ ಇಲ್ಲದಂತಾಗುತ್ತದೆ. ಆದ್ದರಿಂದ ಇಸ್ರೇಲ್ ಪ್ರಧಾನಿ ತನ್ನ ಯೋಜನೆಯನ್ನು ಮುಂದುವರಿಸಬಾರದು ಎಂದು ಮೂರೂ ದೇಶಗಳ ಮುಖಂಡರು ಆಗ್ರಹಿಸಿದ್ದಾರೆ.
ಬುಧವಾರ ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ಗೆ ಕರೆ ಮಾಡಿದ್ದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ `ರಫಾದಲ್ಲಿ ಹಮಾಸ್ ವಿರುದ್ಧ ಯಾವುದೇ ಕಾರ್ಯಾಚರಣೆ ಆರಂಭಿಸುವ ಮುನ್ನ ನಾಗರಿಕರನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು' ಎಂದು ಪೆಂಟಗಾನ್ ಮೂಲಗಳು ಹೇಳಿವೆ.