ಇಸ್ರೇಲ್ ದಾಳಿ ಮಾಡಿದರೆ ನಿರ್ಣಾಯಕ ಪ್ರತಿಕ್ರಿಯೆಗೆ ಸಿದ್ಧ : ಇರಾನ್ ಎಚ್ಚರಿಕೆ
ಟೆಹ್ರಾನ್: ಒಂದು ವೇಳೆ ಇರಾನ್‍ನ ಮೇಲೆ ಇಸ್ರೇಲ್ ದಾಳಿ ಮಾಡಿದರೆ ನಿರ್ಣಾಯಕ ಮತ್ತು ವಿಷಾದಕರ ಪ್ರತಿಕ್ರಿಯೆಗೆ ನಾವು ಸನ್ನದ್ಧರಾಗಿದ್ದೇವೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಜತೆ ದೂರವಾಣಿ ಮೂಲಕ ಮಾತನಾಡಿದ ಅರಾಘ್ಚಿ ` ಈ ವಲಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ರಕ್ಷಿಸಲು ಇರಾನ್ ಗರಿಷ್ಟ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ವೇಳೆ, ಇಸ್ರೇಲ್‍ನ ಯಾವುದೇ ದುಸ್ಸಾಹಸಕ್ಕೆ ನಿರ್ಣಾಯಕ ಮತ್ತು ವಿಷಾದಕರ ರೀತಿಯಲ್ಲಿ ಪ್ರತಿಕ್ರಿಯೆ ನೀಡಲೂ ಸಿದ್ಧವಾಗಿದೆ' ಎಂದು ಎಚ್ಚರಿಕೆ ನೀಡಿರುವುದಾಗಿ ಇರಾನ್ ವಿದೇಶಾಂಗ ಇಲಾಖೆ ಹೇಳಿದೆ.
ಈ ಮಧ್ಯೆ, ಲೆಬನಾನ್‍ನಲ್ಲಿ ಹಿಜ್ಬುಲ್ಲಾಗಳ ಭದ್ರಕೋಟೆ ಎನಿಸಿರುವ ದಕ್ಷಿಣ ಲೆಬನಾನ್, ಬೈರುತ್‍ನ ದಕ್ಷಿಣ ಉಪನಗರಗಳು ಹಾಗೂ ಪೂರ್ವ ಬೆಕಾ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್‍ದಾಳಿಯನ್ನು ತೀವ್ರಗೊಳಿಸಿದೆ. ಬೈರುತ್ ಹಾಗೂ ಸುತ್ತಮುತ್ತಲಿನ ನಗರಗಳ ಮೇಲೆ ಇಸ್ರೇಲ್‍ನ ಬಾಂಬ್ ದಾಳಿಯಲ್ಲಿ ನಾಗರಿಕರ ಸಾವು-ನೋವು ಹೆಚ್ಚಿರುವುದು ಅತ್ಯಂತ ಕಳವಳಕಾರಿ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಪ್ರತಿಕ್ರಿಯಿಸಿದ್ದಾರೆ.