ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಷರೀಫ್ ಪ್ರಮಾಣ ವಚನ
Update: 2024-03-04 16:22 GMT
ಇಸ್ಲಾಮಾಬಾದ್ : ಪಿಎಂಎಲ್-ಎನ್ ಪಕ್ಷದ ಮುಖಂಡ ಶೆಹಬಾಝ್ ಷರೀಫ್ ಪಾಕಿಸ್ತಾನದ 24ನೇ ಪ್ರಧಾನ ಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಧ್ಯಕ್ಷೀಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆರಿಫ್ ಆಲ್ವಿ 72 ವರ್ಷದ ಶೆಹಬಾಝ್ ಷರೀಫ್‍ಗೆ ಪ್ರಮಾಣವಚನ ಬೋಧಿಸಿದರು. ಮಾಜಿ ಪ್ರಧಾನಿ ನವಾಝ್ ಷರೀಫ್, ಪಂಜಾಬ್ ಮುಖ್ಯಮಂತ್ರಿ ಮರ್ಯಂ ನವಾಝ್ ಹಾಗೂ ಇತರ ಪಿಎಂಎಲ್-ಎನ್ ಸದಸ್ಯರು, ಪಿಪಿಪಿ ಮುಖಂಡರು, ಸಿಂಧ್ ಮುಖ್ಯಮಂತ್ರಿ ಮುರಾದ್ ಆಲಿ ಶಾ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ರವಿವಾರ, ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಶೆಹಬಾಝ್ ಷರೀಫ್ ಬಹುಮತ ಸಾಬೀತುಪಡಿಸಲು ಸಫಲರಾಗಿದ್ದರು. 336 ಸದಸ್ಯ ಬಲದ ಸಂಸತ್‍ನಲ್ಲಿ ಪಿಪಿಪಿ-ಪಿಎಂಎಲ್-ಎನ್ ಬೆಂಬಲಿತ ಅಭ್ಯರ್ಥಿ ಶೆಹಬಾಝ್ 201 ಮತ ಪಡೆದರೆ, ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿತ ಅಭ್ಯರ್ಥಿ ಒಮರ್ ಅಯೂಬ್ ಖಾನ್ 92 ಮತಗಳನ್ನು ಪಡೆದರು.