ರಶ್ಯಾ: 7.2 ತೀವ್ರತೆಯ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಶಿವೆಲುಚ್ ಜ್ವಾಲಾಮುಖಿ ಸ್ಫೋಟ
ಮಾಸ್ಕೊ: ರಶ್ಯಾದ ಪೂರ್ವ ಕರಾವಳಿಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಿಗೇ ಶಿವೆಲುಚ್ ಜ್ವಾಲಾಮುಖಿಯು ಸ್ಫೋಟಿಸಿದ್ದು, 8 ಕಿಮೀ ಎತ್ತರಕ್ಕೆ ಬೆಂಕಿಯುಗುಳುತ್ತಿದೆ ಎಂದು ರಶ್ಯಾದ ಸರಕಾರಿ ಸುದ್ದಿ ಸಂಸ್ಥೆ TASS ಅನ್ನು ಉಲ್ಲೇಖಿಸಿ CNN ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜ್ವಾಲಾಮುಖಿಯು ಲಾವಾರಸವನ್ನು ಉಗುಳುತ್ತಿದ್ದು, ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ರಶ್ಯಾದ ಪೂರ್ವ ಕರಾವಳಿಯಾದ ಕಮ್ಚಾತ್ಕ ಪ್ರಾಂತ್ಯದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಭೂಕಂಪನ ಕೇಂದ್ರವು 21 ಕಿ.ಮೀ. ಆಳದಲ್ಲಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಸೆಸ್ಮಾಲಾಜಿಕಲ್ ಸೆಂಟರ್ ಹೇಳಿದೆ.
ಸುನಾಮಿ ಸಾಧ್ಯತೆಯ ಬಗ್ಗೆ ವೈರುಧ್ಯಮಯ ವರದಿಗಳು ಬರುತ್ತಿವೆ. ಅಮೆರಿಕಾ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಕೇಂದ್ರದ ಪ್ರಕಾರ, ಈ ಭೂಕಂಪನದಿಂದ ಸುನಾಮಿ ಅಪಾಯವಿದೆ ಎಂದು ಹೇಳಲಾಗಿದೆ. ಆದರೆ, ರಶ್ಯಾ ತುರ್ತು ಸಚಿವಾಲಯದ ಕಮ್ಚಾತ್ಕ ಶಾಖೆಯ ಪ್ರಕಾರ, ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಹೇಳಲಾಗಿದೆ.
ಭೂಕಂಪನದ ನಂತರದ ಮರು ಕಂಪನಗಳ ತೀವ್ರತೆ 3.9ರಿಂದ 5.0ವರೆಗೂ ಇದೆ ಎಂದೂ ರಶ್ಯ ಅಧಿಕಾರಿಗಳು ತಿಳಿಸಿದ್ದಾರೆ.