ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿ | ಭಾರತೀಯ ಮೂಲದ ಸಿಂಗಾಪುರದ ಮಾಜಿ ಸಚಿವ ಎಸ್. ಈಶ್ವರನ್ ಗೆ ಜೈಲು ಶಿಕ್ಷೆ
ಸಿಂಗಾಪುರ :ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಕ್ಕಾಗಿ ಹಾಗೂ 3 ಲಕ್ಷ ಡಾಲರ್‌ಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ , ಭಾರತೀಯ ಮೂಲದ ಎಸ್. ಈಶ್ವರನ್ ಅವರಿಗೆ ಸ್ಥಳೀಯ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹದಿಮೂರು ವರ್ಷಗಳಿಂದ ಸಿಂಗಾಪುರದಲ್ಲಿ ಸಂಪುಟ ಸಚಿವರಾಗಿದ್ದ ಎಸ್.ಈಶ್ವರನ್, ವಾಣಿಜ್ಯ , ಸಂವಹನ ಹಾಗೂ ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದರು.ಅವರ ವಿರುದ್ಧ ಅಕ್ರಮವಾಗಿ ಉಡುಗೊರೆಗಳನ್ನು ಸ್ವೀಕರಿಸಿದ ನಾಲ್ಕು ಆರೋಪಗಳು ಹಾಗೂ ನ್ಯಾಯಾಂಗ ವಿಚಾರಣೆಗೆ ಅಡ್ಡಿಪಡಿಸಿದ ಇನೊಂದು ಆರೋಪ ದಾಖಲಾಗಿತ್ತು.
ಪರಿಣಾಮಕಾರಿ ಆಡಳಿತಕ್ಕೆ ಸಾರ್ವಜನಿಕ ಸಂಸ್ಥೆಗಳ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸ ತಳಹದಿಯಾಗಿರುತ್ತದೆ. ಆದರೆ ಸಾರ್ವಜನಿಕ ಸೇವಕನೊಬ್ಬ ಪ್ರಾಮಾಣಿಕೆ ಹಾಗೂ ಉತ್ತರದಾಯಿತ್ವದ ಮಾನದಂಡಗಳಿಗಿಂತ ಕೆಳಗೆ ಜಾರಿದಲ್ಲಿ ಅವೆಲ್ಲವೂ ತುಂಬಾ ಸುಲಭವಾಗಿ ಕಡೆಗಣಿಸಲ್ಪಡುತ್ತವೆ ಎಂದು ನ್ಯಾಯಾಧೀಶರು, ಈಶ್ವರನ್ ಅವರಿಗೆ ಶಿಕ್ಷೆಯನ್ನು ಘೋಷಿಸುತ್ತಾ ಹೇಳಿದರು.
ಆರೋಪಿ ಈಶ್ವರನ್ ಅವರಿಗೆ 6ರಿಂದ 7 ತಿಂಗಳುಗಳ ಜೈಲು ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಶನ್ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಒಂದು ವರ್ಷ ಶಿಕ್ಷೆಯನ್ನು ಘೋಷಿಸಿದೆ. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಅವರ ವಕೀಲರ ನ್ಯಾಯಾಲಯವನ್ನು ಕೋರಿದ್ದರು. ಆದರೆ ಅದನ್ನೊಪ್ಪದ ನ್ಯಾಯಾಧೀಶ ನ್ಯಾಯಾಧೀಶ ವಿನ್ಸೆಂಟ್ ಹೂಂಗ್ ತಿ ಅವರು, ಈಶ್ವರನ್ ಎಸಗಿದ ಅಪರಾಧಗಳು ಹಾಗೂ ಆಡಳಿತದ ಮೇಲೆ ಸಾರ್ವಜನಿಕ ನಂಬಿಕೆಯ ಮೇಲೆ ಉಂಟಾಗಿರುವ ಪರಿಣಾಮಮವನ್ನು ಪರಿಗಣಿಸಿ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ತಿಳಿಸಿದರು.