ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆ ತಡೆಯಲು ಐಸಿಜೆಗೆ ದಕ್ಷಿಣ ಆಫ್ರಿಕಾ ಮನವಿ
ದಿ ಹೇಗ್ : ರಫಾದಲ್ಲಿ ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆಯು ಗಾಝಾದಲ್ಲಿನ ಫೆಲೆಸ್ತೀನೀಯರ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಇಸ್ರೇಲ್ ಅನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಯನ್ನು ದಕ್ಷಿಣ ಆಫ್ರಿಕಾ ವಿನಂತಿಸಿದೆ.
ಐಸಿಜೆಯಲ್ಲಿ ಇಸ್ರೇಲ್ ವಿರುದ್ಧ ಕಳೆದ ವರ್ಷ ದಕ್ಷಿಣ ಆಫ್ರಿಕಾ ನರಮೇಧ ಪ್ರಕರಣ ದಾಖಲಿಸಿದೆ. ಇದಕ್ಕೆ ಪೂರಕವಾಗಿ ಸಲ್ಲಿಸಿರುವ ಕೋರಿಕೆಯಲ್ಲಿ `ಐಸಿಜೆ ಈ ಹಿಂದೆ ಜಾರಿಗೊಳಿಸಿದ ಪ್ರಾಥಮಿಕ ಆದೇಶಗಳು ಗಾಝಾದ ಜನರಿಗೆ ಉಳಿದಿರುವ ಏಕೈಕ ಆಶ್ರಯತಾಣದ ಮೇಲೆ ಇಸ್ರೇಲ್‍ನ ಕ್ರೂರ ಮಿಲಿಟರಿ ದಾಳಿಯನ್ನು ತಡೆಯಲು ವಿಫಲವಾಗಿದೆ' ಎಂದು ಉಲ್ಲೇಖಿಸಲಾಗಿದೆ.
ಕಳೆದ ಜನವರಿಯಲ್ಲಿ ಐಸಿಜೆಯಲ್ಲಿ ವಾದ ಮಂಡಿಸಿದ್ದ ಇಸ್ರೇಲ್ ಪರ ನ್ಯಾಯವಾದಿಗಳು `ಹಮಾಸ್ ಸದಸ್ಯರು ನರಮೇಧದ ಅಪರಾಧಿಗಳಾಗಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವು ತನ್ನ ಪ್ರಜೆಗಳನ್ನು ರಕ್ಷಿಸುವ ಕಾನೂನುಬದ್ಧ ಕಾರ್ಯಾಚರಣೆಯಾಗಿದೆ' ಎಂದು ಪ್ರತಿಪಾದಿಸಿದ್ದರು.
ರಫಾದಿಂದ ಸೇನೆಯನ್ನು ಹಿಂಪಡೆಯುವಂತೆ, ಗಾಝಾಕ್ಕೆ ವಿಶ್ವಸಂಸ್ಥೆ ಅಧಿಕಾರಿಗಳು, ಮಾನವೀಯ ನೆರವಿನ ಸಂಘಟನೆಗಳು ಹಾಗೂ ಪತ್ರಕರ್ತರಿಗೆ ಅಡೆತಡೆರಹಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ, ಮತ್ತು ತನ್ನ ಆದೇಶ ಪಾಲನೆಯ ಬಗ್ಗೆ ಒಂದು ವಾರದ ಒಳಗೆ ವರದಿ ನೀಡುವಂತೆ ಇಸ್ರೇಲ್‍ಗೆ ಸೂಚಿಸಬೇಕು ಎಂದು ದಕ್ಷಿಣ ಆಫ್ರಿಕಾ ಐಸಿಜೆಗೆ ಮನವಿ ಮಾಡಿದೆ.
ಗಾಝಾದಲ್ಲಿ ಸಾವುನೋವು, ವಿನಾಶ ಅಥವಾ ನರಮೇಧದ ಯಾವುದೇ ಕೃತ್ಯಗಳನ್ನು ತಡೆಯಲು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜನವರಿಯಲ್ಲಿ ವಿಶ್ವನ್ಯಾಯಾಲಯ ಇಸ್ರೇಲ್‍ಗೆ ಸೂಚಿಸಿತ್ತು. ಎರಡು ತಿಂಗಳ ಬಳಿಕ ನೀಡಿದ್ದ ಮತ್ತೊಂದು ಸೂಚನೆಯಲ್ಲಿ ಗಾಝಾಕ್ಕೆ ಹೆಚ್ಚಿನ ಆಹಾರ, ನೀರು,ಇಂಧನ ಹಾಗೂ ಇತರ ಪೂರೈಕೆಗೆ ಅನುವು ಮಾಡಿಕೊಡಲು ಇನ್ನಷ್ಟು ಗಡಿದಾಟುಗಳನ್ನು ತೆರೆಯುವ ಮೂಲಕ ಮಾನವೀಯ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು.
ಈ ಮಧ್ಯೆ, ಇಸ್ರೇಲ್ ವಿರುದ್ಧ ಜಾಗತಿಕ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾ ದಾಖಲಿಸಿರುವ ಪ್ರಕರಣದಲ್ಲಿ ತಾನು ದಕ್ಷಿಣ ಆಫ್ರಿಕಾವನ್ನು ಬೆಂಬಲಿಸಿ ವಾದ ಮಂಡಿಸುವುದಾಗಿ ಲಿಬಿಯಾ ಕೋರಿಕೆ ಸಲ್ಲಿಸಿದೆ. ಇಸ್ರೇಲ್‍ಗೆ ಶಸ್ತ್ರಾಸ್ತ್ರ ಪೂರೈಸುವ ಮೂಲಕ ಜರ್ಮನಿ ನರಮೇಧಕ್ಕೆ ನೆರವಾಗುತ್ತಿದೆ ಎಂದು ಆರೋಪಿಸಿ ನಿಕರಾಗುವಾ ಪ್ರತ್ಯೇಕ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿದೆ.