ಶ್ರೀಲಂಕಾ: ರಾಜಕೀಯ ವಿರೋಧಿಯ ಹತ್ಯೆಗೈದಿದ್ದ ಮಾಜಿ ಸಂಸದನ ಕ್ಷಮಾದಾನ ರದ್ದುಗೊಳಿಸಿದ ನ್ಯಾಯಾಲಯ
ಕೊಲಂಬೊ: ತನ್ನ ರಾಜಕೀಯ ಪ್ರತಿಸ್ಪರ್ಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಮಾಜಿ ಸಂಸದನನ್ನು ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿರುವುದು ಸರಿಯಲ್ಲ ಎಂದು ಬುಧವಾರ ತೀರ್ಪು ನೀಡಿರುವ ಶ್ರೀಲಂಕಾದ ನ್ಯಾಯಾಲಯ, ಮಾಜಿ ಸಂಸದನನ್ನು ಮತ್ತೆ ಜೈಲಿಗೆ ಕಳುಹಿಸಲು ಆದೇಶಿಸಿದೆ.
ರಾಜಕೀಯ ವಿರೋಧಿ ಭರತ ಲಕ್ಷ್ಮಣ್ ಪ್ರೇಮಚಂದ್ರ ಹಾಗೂ ಅವರ ಮೂವರು ಬೆಂಬಲಿಗರನ್ನು 2011ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಮಾಜಿ ಸಂಸದ ಡುಮಿಂಡ ಸಿಲ್ವಾ ದೋಷಿಯೆಂದು ಘೋಷಿಸಿದ್ದ ನ್ಯಾಯಾಲಯ ಸಿಲ್ವಾಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರೇಮಚಂದ್ರ ಹಾಗೂ ಸಿಲ್ವಾ ಇಬ್ಬರೂ ಆಗ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸರ ರಾಜಕೀಯ ಪಕ್ಷದ ಸದಸ್ಯರಾಗಿದ್ದರು. ಆದರೆ ಪ್ರತ್ಯೇಕ ಬಣದಲ್ಲಿ ಗುರುತಿಸಿಕೊಂಡಿದ್ದರು. 2021ರಲ್ಲಿ ಅಧ್ಯಕ್ಷರ ಕ್ಷಮಾದಾನದ ಅಡಿಯಲ್ಲಿ ಸಿಲ್ವಾರನ್ನು ಬಿಡುಗಡೆಗೊಳಿಸುವಂತೆ ಗೊಟಬಯ ಸರಕಾರ ಸೂಚಿಸಿತ್ತು. ಬಿಡುಗಡೆಯಾದ ಸಿಲ್ವಾರನ್ನು ವಸತಿ ಇಲಾಖೆಯ ಉಸ್ತುವಾರಿಯನ್ನಾಗಿ ಗೊಟಬಯ ನೇಮಿಸಿದ್ದರು.
ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಕ್ಷಮಾದಾನ ನೀಡುವಾಗ ಗೊಟಬಯ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂದು ತೀರ್ಪು ನೀಡಿ, ಸಿಲ್ವಾಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಊರ್ಜಿತಗೊಳಿಸಿ ಅವರನ್ನು ಮತ್ತೆ ಜೈಲಿಗೆ ಹಾಕುವಂತೆ ಆದೇಶಿಸಿದೆ.